ಮಂಗಳವಾರ, ಸೆಪ್ಟೆಂಬರ್ 21, 2021
23 °C
ಪಡುಬಿದ್ರಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ

ಪಡುಬಿದ್ರಿ: ಅಧಿಕಾರಿಗಳ ಗೈರು ಹಾಜರಿಗೆ ತೀವ್ರ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಡುಬಿದ್ರಿ: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಗೆ ಅಧಿಕಾರಿಗಳ ಗೈರು ಹಾಜರಾಗಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿ ಮುಂದಿನ ಎಸ್‌ಸಿ,ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ಸಭೆಯಲ್ಲಿ ಅಧಿಕಾರಿಗಳು ಪಾಲ್ಗೊಳ್ಳದೆ ಇದ್ದರೆ ಸಭೆ ಬಹಿಷ್ಕರಿಸುವ ಬಗ್ಗೆ ಎಚ್ಚರಿಕೆ ನೀಡಿದರು.

ಗ್ರಾಮ ವ್ಯಾಪ್ತಿಯ ಕಂಚಿನಡ್ಕ ಸೇರಿದಂತೆ ಹಲವು ಕಡೆಗಳಲ್ಲಿ ಗಾಂಜಾ ವ್ಯಸನಿಗಳಿಂದ ಸಮಸ್ಯೆಗಳು ಉಂಟಾಗಿವೆ. ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ದಲಿತ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು.

ಪಾದೆಬೆಟ್ಟು ಗ್ರಾಮದಲ್ಲಿ ಕಾರ್ಯಾಚರಿಸುವ ಗ್ಯಾಸ್ ಗೋಡೌನ್‌ನಿಂದ ಸುತ್ತಲ ಮನೆಗಳಿಗೆ ತೀವ್ರ ಅಪಾಯವಿದೆ. ಅದರ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಲಾಯಿತು.

ಕಂಚಿನಡ್ಕದಲ್ಲಿ ಕಾರ್ಯಾಚರಿಸು ತ್ತಿರುವ ಸಾರ್ವಜನಿಕ ಹಿಂದೂ ಸ್ಮಶಾನ ನವೀಕರಣಕ್ಕೆ ಆಗ್ರಹಿಸಲಾಗಿದ್ದು, ಅದರ ನಿರ್ವಹಣೆಗೆ ಸಮಿತಿ ರಚಿಸುವಂತೆ ಮನವಿ ಸಲ್ಲಿಸಲಾಯಿತು.

ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರ ಒಳಗೊಂದಲದ ಬಗ್ಗೆ ಮಾಹಿತಿ ನೀಡಿ ಗೊಂದಲ ನಿವಾರಣೆಗೆ ಆಗ್ರಹಿಸಲಾಯಿತು. ಕಲ್ಲಟೆ ಅಂಬೇಡ್ಕರ್ ಭವನದ ದುರಸ್ತಿಗೆ ಮನವಿ ಮಾಡಲಾಯಿತು.‌

ಪಂಚಾಯಿತಿ ಸುಪರ್ದಿ ಪರಿಶಿಷ್ಟರಿಗೆ ಮೀಸಲಿಟ್ಟ ಅಂಗಡಿ ಕೋಣೆಗಳ ಪಾರದರ್ಶಕ ಹಂಚಿಕೆ ಬಗ್ಗೆ ಚರ್ಚಿಸಲಾಯಿತು. ಕಲ್ಲಟ್ಟೆ ಪರಿಶಿಷ್ಟ ಕಾಲೊನಿ ಹೈಟೆನ್ಶನ್ ವಿದ್ಯುತ್ ತಂತಿಯಿಂದ ಅಪಾಯವಿದೆ. ಸ್ಥಳಾಂತರಗೊಳಿಸುವಂತೆ ಆಗ್ರಹಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯಾಧಿಕಾರಿ ಇಲ್ಲದಿರುವ ಬಗ್ಗೆ ಗಮನ ಸೆಳೆದು ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸುವಂತೆ ಆಗ್ರಹಿಸಿದರು.

ಪಾದೆಬೆಟ್ಟು ಪರಿಶಿಷ್ಟ ಕಾಲೊನಿಗೆ ಸಮರ್ಪಕ ಕುಡಿವ ನೀರು ಪೂರೈಕೆ, ಶೇ25ರ ನಿಧಿಯ ಕಾಮಗಾರಿಯನ್ನು ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೆ ಕಡ್ಡಾಯ ನೀಡುವಿಕೆ ಬಗ್ಗೆ ಮನವಿ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಮಾತನಾಡಿ, ಸಭೆಯಲ್ಲಿ ಕಂಡುಕೊಂಡ ಎಲ್ಲ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಗ್ರಾಮಾಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷೆ ಯಶೋದಾ ಪೂಜಾರಿ, ಕಾರ್ಯದರ್ಶಿ ರೂಪಲತಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನಯನಾ ಇದ್ದರು. ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಸ್ವಾಗತಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು