ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುತ್ತಿದೆ ಸೀವಾಕ್‌ ಉದ್ಯಾನ: ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣ

₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣ, ಕಣ್ಮನ ಸೆಳೆಯುವ ಜಟಾಯು, ಸುಂದರ ಶಿಲ್ಪಗಳು
Last Updated 1 ಜನವರಿ 2022, 14:46 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಗೆ ಪ್ರವಾಸ ಬರುವ ಬಹುತೇಕರು ತಪ್ಪದೆ ಮಲ್ಪೆ ಬೀಚ್‌ ಹಾಗೂ ಸೇಂಟ್ ಮೇರಿಸ್‌ ಐಲ್ಯಾಂಡ್‌ಗೆ ಭೇಟಿ ನೀಡುತ್ತಾರೆ. ಆದರೆ, ಮಲ್ಪೆಯ ಮಗ್ಗುಲಲ್ಲೇ ಇರುವ ಸೀವಾಕ್‌ ಸುಂದರ ಉದ್ಯಾನ ಹಾಗೂ ಪಡುಕೆರೆ ಬೀಚ್‌ಗೆ ಹೋಗುವುದು ಅಪರೂಪ. ಮುಂದಿನ ಸಲ ಉಡುಪಿಗೆ ಭೇಟಿ ನೀಡುವಾಗ ಸೀವಾಕ್‌ ಉದ್ಯಾನ ಹಾಗೂ ಪಡುಕೆರೆ ಬೀಚ್‌ ಕೂಡ ಪ್ರವಾಸದ ಭಾಗವಾಗಿರಲಿ. ಕಾರಣ ಸೀವಾಕ್ ಉದ್ಯಾನ ಸುಂದರವಾಗಿ ನಿರ್ಮಾಣಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮಲ್ಪೆ ಬಂದರು ಹಾಗೂ ಬೀಚ್‌ಗೆ ತಾಗಿಕೊಂಡಿರುವ ವಿಶಾಲವಾದ ಸೀವಾಕ್ ಉದ್ಯಾನವನ್ನು ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕುಟುಂಬ ಸಮೇತರಾಗಿ ಭೇಟಿನೀಡಬಹುದಾದ ಸುಂದರವಾದ ತಾಣವಾಗಿದೆ ಸೀವಾಕ್ ಉದ್ಯಾನ.

ಕಡಲಿಗೆ ಹೊಂದಿಕೊಂಡಂತೆ 50,000 ಚದರಡಿಯಲ್ಲಿ ನಿರ್ಮಾಣವಾಗಿರುವ ಸೀವಾಕ್ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಕಾರುಗಳನ್ನು ನಿಲುಗಡೆ ಮಾಬಹುದು. ಉದ್ಯಾನದ ನೆಲಹಾಸಿಗೆ ಇಂಟರ್‌ಲಾಕ್‌ ಬಳಸಲಾಗಿದೆ. ಜತೆಗೆ ವಿಶಾಲವಾದ ಆ್ಯಂಪಿ ಥಿಯೇಟರ್‌ ನಿರ್ಮಾಣವಾಗಿದ್ದು, 250 ಮಂದಿ ಒಂದೆಡೆ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಬಹುದು.

ಇಳಿಸಂಜೆಯ ಹೊತ್ತು ಕಡಲಿಗೆ ಮುಖಮಾಡಿ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಲ್ಲಲ್ಲಿ ಕಲ್ಲಿನ ಬೆಂಚ್‌ಗಳನ್ನು ಹಾಕಲಾಗಿದೆ. ಸಮುದ್ರದ ಅಲೆಗಳು ಕಾರ್ಗಲ್ಲಿಗೆ ಬಂದು ಬಡಿಯುವ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಬೇಸಗೆಯಲ್ಲೂ ತಂಪಾದ ಅನುಭವ ನೀಡಲು ಆವೆಮಣ್ಣಿನ ಇಟ್ಟಿಗೆಗಳನ್ನು ಕಾಮಗಾರಿಗೆ ಬಳಸಿರುವುದು ವಿಶೇಷ.

ಜಟಾಯು ಶಿಲ್ಪ ವಿಶೇಷ ಆಕರ್ಷಣೆ:

ಉದ್ಯಾನದ ಮಧ್ಯೆ ನಿರ್ಮಾಣವಾಗಿರುವ ಬೃಹತ್‌ ಜಟಾಯು ಶಿಲ್ಪ ಪ್ರಮುಖ ಆಕರ್ಷಣೆ. ಜತೆಗೆ, ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಶಿಲ್ಪಗಳನ್ನು ಉದ್ಯಾನದ ಅಲ್ಲಲ್ಲಿ ನಿರ್ಮಾಣ ಮಾಡಲಾಗಿದೆ. ಮೀನುಗಾರರ ಶ್ರಮ ಸಂಸ್ಕೃತಿಯನ್ನು ಬಿಂಬಿಸುವ ಕಾಂಕ್ರೀಟ್‌ ಶಿಲ್ಪಗಳ ಬಳಿ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು.

ಮಕ್ಕಳಿಗೆ ಆಟವಾಡಲು ಜಾರುಬಂಡೆಗಳಿವೆ. ಜತೆಗೆ, ಮನರಂಜನೆಗೆ ಕ್ರೀಡೆಗಳು ಇವೆ. ಪ್ರವಾಸಿಗರಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಹಾಗೂ ಫುಡ್‌ ಕೋರ್ಟ್‌ ನಿರ್ಮಾಣವಾಗಿದೆ. ಉದ್ಯಾನದಲ್ಲಿ ಕುಳಿತು ಸಂಜೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಕಾಮಗಾರಿಗಳಿಗೆ ಹೆಚ್ಚಾಗಿ ಕಲ್ಲು ಹಾಗೂ ಸಿಮೆಂಟ್‌ ಬಳಕೆ ಮಾಡಲಾಗುತ್ತಿದೆ.

ಲಾಕ್‌ಡೌನ್‌ ಆರಂಭದಲ್ಲಿ ಉದ್ಯಾನದ ಕಾಮಗಾರಿಗೆ ಚಾಲನೆ ಸಿಕ್ಕು ಕಾಮಗಾರಿ ಪೂರ್ಣಗೊಂಡು ಪ್ರವಾಸಿಗರಿಗೆ ಮುಕ್ತವಾಗಿದೆ. ನಿರ್ಮಿತಿ ಕೇಂದ್ರ ಸೀವಾಕ್ ಉದ್ಯಾನ ನಿರ್ಮಾಣ ಮಾಡಿದ್ದು, ನಿರ್ವಹಣೆ ಹೊಣೆಯನ್ನು ಮಲ್ಪೆ ಬೀಚ್ ನಿರ್ವಹಣಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT