ಗುರುವಾರ , ಡಿಸೆಂಬರ್ 5, 2019
20 °C
ರಾತ್ರಿ, ಬೆಳಗಿನ ಜಾವ ಕೃತ್ಯ: ಸೆಕ್ಯುರಿಟಿ ಗಾರ್ಡ್‌ ಬಂಧನ

ಕೆಲಸಕ್ಕೆ ಹೋಗುವ ದಾರಿಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ರಾತ್ರಿ ಹಾಗೂ ಬೆಳಗಿನ ಜಾವ ಒಂಟಿಯಾಗಿ ಸಾಗುವ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಪರ್ಕಳದ ಸಣ್ಣಕ್ಕಿಬೆಟ್ಟುವಿನ ದೀಪಕ್ ನಾಯಕ್ ಬಂಧಿತ ಆರೋಪಿ. ಈತ ನಗರದ ಕೆನರಾ ಬ್ಯಾಂಕ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ಆರೋಪಿಯು ರಾತ್ರಿ ಕೆಲಸಕ್ಕೆ ಹೊರಡುವಾಗ ಮಾರ್ಗಮಧ್ಯೆ ಸಿಗುವ ವಿದ್ಯಾರತ್ನ ನಗರ, ಪೆರಂಪಳ್ಳಿ ರಸ್ತೆ, ಈಶ್ವರ ನಗರ ವ್ಯಾಪ್ತಿಯಲ್ಲಿ, ಬೀದಿದೀಪಗಳು ಇಲ್ಲದ ಕಡೆ ಒಂಟಿಯಾಗಿ ಸಾಗುವ ಮಹಿಳೆಯರು ಹಾಗೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗುತ್ತಿದ್ದ.

ಬಳಿಕ ಸೆಕ್ಯೂರಿಟಿ ಕೆಲಸ ಮುಗಿಸಿ ಬೆಳಗಿನ ಜಾವ ರಸ್ತೆಯಲ್ಲಿ ವಾಕಿಂಗ್‌ಗೆ ಬರುವ ವಿದ್ಯಾರ್ಥಿನಿಯರಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಕೃತ್ಯದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಎಸ್‌ಪಿ ನಿಶಾ ಜೇಮ್ಸ್‌ ಆರೋಪಿ ಪತ್ತೆಗೆ, ಎಎಸ್‌ಪಿ ಕುಮಾರಚಂದ್ರ ಹಾಗೂ ಡಿವೈಎಸ್‌ಪಿ ಜೈಶಂಕರ್ ಮಾರ್ಗದರ್ಶನದ ತಂಡ ರಚಿಸಿದ್ದರು. ಆರೋಪಿಯ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಮಣಿಪಾಲ ಪೊಲೀಸರು ಈಶ್ವರ ನಗರದಲ್ಲಿ ಬಂಧಿಸಿದ್ದಾರೆ. ಆತನಿಂದ ಬೈಕ್‌ ವಶಪಡಿಸಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)