ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರು ಬಂದರೆ ಉಡುಪಿಗೆ ಫರ್ನಿಚರ್‌ ಕ್ಲಸ್ಟರ್

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್
Last Updated 6 ನವೆಂಬರ್ 2020, 13:26 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಫರ್ನಿಚರ್ ಕ್ಲಸ್ಟರ್ ಆರಂಭಿಸಲು ಸರ್ಕಾರ ಸಿದ್ಧವಿದೆ. ಆದರೆ, ಬಂಡವಾಳ ಹೂಡಲು ಹೂಡಿಕೆದಾರರು ಸಿದ್ಧರಿದ್ದಾರೆಯೇ ಎಂಬುದು ಖಚಿತವಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ರಾಜ್ಯದ ಏಳೆಂಟು ಜಿಲ್ಲೆಗಳಿಗೆ ಕ್ಲಸ್ಟರ್‌ಗಳನ್ನು ಘೋಷಿಸಿದೆ. ಆದರೆ, ಬಂಡವಾಳ ಹೂಡಲು ಕಂಪೆನಿಗಳು ಮುಂದೆ ಬರುತ್ತಿಲ್ಲ. ಹಾಗಾಗಿ, ಜಿಲ್ಲೆಯಲ್ಲಿ ಫರ್ನಿಚರ್‌ ಕ್ಲಸ್ಟರ್ ಆರಂಭಕ್ಕೆ ಪೂರಕ ವಾತಾವರಣ ಇದೆಯೇ ಎಂಬುದನ್ನು ಮೊದಲು ಖಚಿತವಾಗಬೇಕು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ರಘುಪತಿ ಭಟ್‌, ‘ಜಿಲ್ಲೆಯಲ್ಲಿ ಫರ್ನಿಚರ್ ಕ್ಲಸ್ಟರ್‌ ಆರಂಭವಾದರೆ ಮಂಗಳೂರು ಬಂದರಿನ ಮೂಲಕ ವಿದೇಶಗಳಿಗೆ ಪೀಠೋಪಕರಣಗಳನ್ನು ರಫ್ತು ಮಾಡಬಹುದು. ಅಲ್ಲಿಂದ ಬೆಲೆಬಾಳುವ ಮರಗಳನ್ನು ಆಮದು ಮಾಡಿಕೊಳ್ಳಬಹುದು. ಇದರಿಂದ ಸ್ಥಳೀಯವಾಗಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂಬ ಬೇಡಿಕೆ ಮುಂದಿಟ್ಟರು.

ಫರ್ನಿಚರ್ ಕ್ಲಸ್ಟರ್ ಆರಂಭಕ್ಕೆ ಅಗತ್ಯವಾದ ಸರ್ಕಾರಿ ಭೂಮಿ ಲಭ್ಯವಿಲ್ಲ. ಖಾಸಗಿಯವರಿಂದ 500 ಎಕರೆ ಖರೀದಿಸಿ, ಕುಂದಾಪುರ ಅಥವಾ ಉಡುಪಿಯಲ್ಲಿ ಕ್ಲಸ್ಟರ್ ಆರಂಭಿಸಿದರೆ ಅನುಕೂ. ಉಡುಪಿ ದೇಶಕ್ಕೆ ಮಾದರಿ ಕ್ಲಸ್ಟರ್‌ ಆಗಿ ಕಾರ್ಯ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕರ ಬೇಡಿಕೆಗೆ ಒಪ್ಪಿದ ಸಚಿವರು ಭೂಮಿ ಗುರುತಿಸುವಂತೆ ಸೂಚನೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರನ್ನು ಅಭಿವೃದ್ಧಿಪಡಿಸಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಂದ ವಿದೇಶಗಳಿಗೆ ರಫ್ತು ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವಿದೆ. ಬಂದರು ಅಭಿವೃದ್ಧಿಗೆ ಡಿಪಿಆರ್ ತಯಾರಿಸಲು ಸೂಚನೆ ನೀಡಲಾಗಿದೆ. ಜತೆಗೆ, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯ ಉದ್ದೇಶವೂ ಇದೆ ಎಂದರು.

‘ಮೂಲ ಉದ್ದೇಶ ಮಣ್ಣು ಪಾಲು’

ರೈತರಿಂದ ಬಿಡಿಗಾಡಿಗೆ ಭೂಮಿ ಖರೀದಿಸಿ ಖಾಸಗಿ ಕಂಪೆನಿಗಳಿಗೆ ಹಂಚಿಕೆ ಮಾಡಿರುವ ನೂರಾರು ಎಕರೆ ಭೂಮಿ ಸದ್ಬಳಕೆಯಾಗುತ್ತಿಲ್ಲ. ನೆಪಮಾತ್ರಕ್ಕೆ ಸ್ವಲ್ಪ ಭೂಮಿಯನ್ನು ಬಳಸಿಕೊಂಡು ಉಳಿಕೆ ಜಾಗವನ್ನು ಬೇರೆ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕಾರ್ಖಾನೆಗಳಿಗೆ ಭೂಮಿ ಹಂಚಿಕೆ ಮಾಡಿದ ಮೂಲ ಉದ್ದೇಶ ಸ್ಥಳೀಯರಿಗೆ ಉದ್ಯೋಗಗಳು ಸಿಗಬೇಕು, ಆರ್ಥಿಕ ಅಭಿವೃದ್ಧಿಯಾಗಬೇಕು ಎಂಬುದು. ಆದರೆ, ಮೂಲ ಉದ್ದೇಶವನ್ನೇ ಮರೆತಿರುವ ಕಂಪೆನಿಗಳು ಸ್ಥಳೀಯರನ್ನು ಕೆಲಸದಿಂದ ತೆಗೆದುಹಾಕುತ್ತಿವೆ ಎಂದು ಶಾಸಕ ರಘುಪತಿ ಭಟ್‌ ಸಭೆಯಲ್ಲಿ ಆಕ್ರೋಶ ಹೊರಹಾಕಿದರು.

‘ವರದಿ ಪರಿಶೀಲಿಸಿ ಕ್ರಮ’

ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆ ಆರಂಭಿಸಲು ಹಂಚಿಕೆಯಾಗಿರುವ ಭೂಮಿ ಸದ್ಬಳಕೆಯಾಗಿದೆಯೇ ಎಂಬ ಕುರಿತು ಅಧಿಕಾರಿಗಳ ತಂಡ ಪರಿಶೀಲಿಸಿ ವರದಿ ನೀಡಬೇಕು. ಕೆಲವು ಕಂಪೆನಿಗಳಿಗೆ ಹಿಂದಿನ ಸರ್ಕಾರ ಸೇಲ್‌ ಡೀಡ್‌ ನೀಡಿದೆ ಎಂದು ಕಂಪೆನಿಯ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಗೋಡಂಬಿ ಉದ್ಯಮ ಪ್ರಮುಖವಾಗಿದ್ದು, ಸಾವಿರಾರು ಮಂದಿಗೆ ಉದ್ಯೋಗ ನೀಡಲಾಗಿದೆ. ರಫ್ತು ಆಧಾರಿತ ಗೋಡಂಬಿ ಉದ್ಯಮ ಲಾಕ್‌ಡೌನ್‌ನಿಂದ ನಲುಗಿದೆ. ಬಹುತೇಕ ಕಾರ್ಖಾನೆಗಳು ಗ್ರಾಮಾಂತರ ಪ್ರದೇಶಗಳಲ್ಲಿದ್ದು, ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು. ರಫ್ತಿಗೆ ಉತ್ತೇಜನ ನೀಡಬೇಕು. ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಉದ್ಯಮಿಗಳು ಒತ್ತಾಯಿಸಿದರು.

ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅದ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ರಾಘವೇಂದ್ರ ಕಿಣಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಕೆಐಎಡಿಬಿ ಸಿಇಒ ಶಿವಶಂಕರ್ ಹಾಗೂ ಉದ್ಯಮಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT