ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಗ್ರಹಿಕೆ, ಆತುರದ ಹೇಳಿಕೆ ಸೃಷ್ಟಿಸಿದ ಗೊಂದಲ?

ಶಿರೂರು ಶ್ರೀಗಳ ಅನುಮಾನಾಸ್ಪದ ಸಾವಿನ ರಹಸ್ಯ ಬಯಲು
Last Updated 9 ಸೆಪ್ಟೆಂಬರ್ 2018, 20:14 IST
ಅಕ್ಷರ ಗಾತ್ರ

ಉಡುಪಿ: ಶಿರೂರು ಲಕ್ಮೀವರ ತೀರ್ಥರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ವೈದರ ಗ್ರಹಿಕೆ ಹಾಗೂ ಆತುರದ ಹೇಳಿಕೆಗಳು ರಾದ್ಧಾಂತಕ್ಕೆ ಕಾರಣವಾಯ್ತಾ ಎಂಬ ಅನುಮಾನಗಳು ದಟ್ಟವಾಗಿವೆ.

ಜುಲೈ 19ರಂದು ಶಿರೂರು ಶ್ರೀಗಳು ಮೃತಪಟ್ಟಾಗ ಅವರ ಸಾವಿನಲ್ಲಿ ವಿಷಪ್ರಾಷನ ಶಂಕೆಯಿದೆ ಎಂಬ ಕೆಎಂಸಿ ಆಸ್ಪತ್ರೆ ವೈದ್ಯರ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಅಂದು ವೈದ್ಯರು ಶ್ರೀಗಳ ಸಾವಿನ ಕಾರಣವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿಕೊಂಡು ಹೇಳುವ ಬದಲು, ಇಂಗ್ಲೀಷ್‌ನಲ್ಲೇ ಹೇಳಿದ್ದರೆ ಗೊಂದಲಗಳು ಸೃಷ್ಟಿಯಾಗುತ್ತಿರಲಿಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ಕನ್ನಡದಲ್ಲಿ ಹೇಳಿಕೆ ನೀಡುವ ಬದಲು,ಇದೊಂದು ಮೆಡಿಕೋ ಲೀಗಲ್‌ ಪ್ರಕರಣವಾಗಿದ್ದು, ಹೆಚ್ಚಿನ ತನಿಖೆಗೆ ಪೊಲೀಸರಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದ್ದರೆ ಸಾಕಿತ್ತು. ಅನುವಾದ ತಂದ ಅವಾಂತರ ಇಷ್ಟೆಲ್ಲ ಗೊಂದಲಗಳಿಗೆ ಕಾರಣವಾಗಿರಬಹುದು ಎನ್ನುತ್ತಾರೆ ಪೊಲೀಸರು.‌

ಜತೆಗೆ ಮತ್ತೊಂದಿಷ್ಟು ತಪ್ಪು ಗ್ರಹಿಕೆಗಳು ಪ್ರಕರಣವನ್ನು ಗೊಂದಲಗೊಳಿಸಿದವು ಎನ್ನಲಾಗಿವೆ.ಶ್ರೀಗಳು ಮೃತಪಟ್ಟಾಗ ವೈದ್ಯರು 2 ಪ್ರಮುಖ ಪರೀಕ್ಷೆಗಳನ್ನು ಮಾಡಿದ್ದರು. ಅದರಲ್ಲಿ ಒಂದು, ಸ್ಕಿನ್‌ ಕ್ರೊಮೊಟಗ್ರಫಿ ಲೇಯರ್ ಟೆಸ್ಟ್. ಈ ಪರೀಕ್ಷೆಯಲ್ಲಿ ಕೆಲವೊಮ್ಮೆ ಸಾವಿಗೆ ನಿಖರ ಕಾರಣ ತಿಳಿಯುತ್ತದೆ. ಕೆಲವೊಮ್ಮೆ ತಿಳಿಯುವುದಿಲ್ಲ. ಈ ವರದಿಯನ್ನೇ ಅಂತಿಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಗೊಂದಲಕ್ಕೆ ಮೊದಲ ಕಾರಣ ಎನ್ನುತ್ತಾರೆ ಅಧಿಕಾರಿಗಳು.

ಎರಡನೆಯದು ಸುಡೊ ಕಲೊನಿಸಿಸ್ ಎಂಝೈಮ್‌ ಪರೀಕ್ಷೆ. ವ್ಯಕ್ತಿಯ ದೇಹದಲ್ಲಿ ನಿರ್ಧಿಷ್ಟ ಪ್ರಮಾಣದಲ್ಲಿ ‘ಕಿಣ್ವ’ ಗಳಿರುತ್ತವೆ. ವ್ಯಕ್ತಿ ವಿಷ ತೆಗೆದುಕೊಂಡರೆ ಕಿಣ್ವಗಳ ಸಂಖ್ಯೆ ಕುಸಿಯುತ್ತದೆ. ಲಿವರ್ ಕಾಯಿಲೆ ಇದ್ದರೂ ಕಿಣ್ವಗಳು ಕಡಿಮೆಯಾಗುತ್ತವೆ. ವೈದ್ಯರು ವಿಷಪ್ರಾಷನದಿಂದ ಸ್ವಾಮೀಜಿಯ ದೇಹದಲ್ಲಿ ಕಿಣ್ವಗಳು ಕಡಿಮೆಯಾಗಿರಬಹುದು ಎಂಬ ಅಭಿಪ್ರಾಯಕ್ಕೆ ಬಂದಿರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ಅವರು.

ವಾಸ್ತವವಾಗಿ ಸ್ವಾಮೀಜಿಗೆ ಯಕೃತ್ತು ವೈಫಲ್ಯವಾಗಿತ್ತು. ಪರಿಣಾಮ ದೇಹದಲ್ಲಿ ಕಿಣ್ವಗಳ ಸಂಖ್ಯೆ ಕ್ಷೀಣವಾಗಿತ್ತು. ಇದನ್ನು ವೈದ್ಯರು ತಪ್ಪಾಗಿ ಗ್ರಹಿಸಿದ್ದರಿಂದ ಪ್ರಕಟ ಜಟಿಲವಾಯಿತು ಎನ್ನುತ್ತಾರೆ ಅಧಿಕಾರಿಗಳು.‌

ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿ ತಾಳೆಯಾಗಿದ್ದು, ಶ್ರೀಗಳ ದೇಹದಲ್ಲಿ ಯಾವುದೇ ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ. ಅನ್ನನಾಳದಲ್ಲಿ ತೀವ್ರ ರಕ್ತಸ್ರಾವ, ಲಿವರ್ ವೈಫಲ್ಯದಿಂದ ಶಿರೂರು ಶ್ರೀಗಳು ಮೃತಪಟ್ಟಿದ್ದಾರೆ ಎಂಬ ಅಂಶ ಅಂತಿಮ ವರದಿಯಲ್ಲಿ ಸ್ಪಷ್ಟವಾಗಿದೆ ಎನ್ನುತ್ತಾರೆ ಅವರು.

ಪ್ರಕರಣದಲ್ಲಿ ಎಫ್‌ಎಸ್ಎಲ್‌ ವರದಿ ನೀಡುವುದು ವಿಳಂಬವಾಗಿದೆ ಎಂಬ ಆರೋಪ ಸರಿಯಲ್ಲ. ವರದಿ ವೇಗವಾಗಿ ಇಲಾಖೆಯ ಕೈಸೇರಿದೆ. ಕಾಲಮಿತಿಯೊಳಗೆ ಪ್ರಕರಣ ಮುಕ್ತಾಯವಾಗಿದೆ. 84 ವಸ್ತುಗಳನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿತ್ತು. 12 ದಿನಗಳಲ್ಲಿ ತಜ್ಞರು ಪರೀಕ್ಷೆ ಮಾಡಿ ವರದಿ ನೀಡಿದ್ದಾರೆ. ಆರೋಪದಲ್ಲಿ ಯಾವುದೇ ಉರುಳಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT