ವಾರಕ್ಕೊಂದು ದಿನ ಕ್ಷೇತ್ರ ಪ್ರವಾಸ: ನೂತನ ಸಂಸದೆ ಶೋಭಾ ಕರಂದ್ಲಾಜೆ ಮನದಾಳ

ಬುಧವಾರ, ಜೂನ್ 19, 2019
23 °C
ಉಡುಪಿ ಚಿಕ್ಕಮಗಳೂರು ಕ್ಷೇತ್ರ

ವಾರಕ್ಕೊಂದು ದಿನ ಕ್ಷೇತ್ರ ಪ್ರವಾಸ: ನೂತನ ಸಂಸದೆ ಶೋಭಾ ಕರಂದ್ಲಾಜೆ ಮನದಾಳ

Published:
Updated:
Prajavani

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲೂ ಜಯಗಳಿಸಿದ್ದ ಶೋಭಾ ಅವರಿಗೆ ಸತತ 2ನೇ ಬಾರಿಗೆ ವಿಜಯ ಜಯಲಕ್ಷ್ಮಿ ಒಲಿದಿದ್ದಾಳೆ.

ಗೆಲುವಿನ ಸಂಭ್ರಮದಲ್ಲಿದ್ದ ಶೋಭಾ ಕರಂದ್ಲಾಜೆ ಅವರು ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

ಸತತ 2ನೇ ಬಾರಿ ಗೆಲುವು ಸಾಧಿಸಿದ್ದೀರಿ, ಹೇಗನಿಸುತ್ತಿದೆ ?

ತುಂಬಾ ಖುಷಿ ಇದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಿರುವ ಸಿಹಿ ಘಳಿಗೆಯಲ್ಲಿ ಜಯ ಒಲಿದು ಬಂದಿದ್ದು ಸಂತಸ ಇಮ್ಮಡಿಗೊಳಿಸಿದೆ. ವಿರೋಧ ಪಕ್ಷಗಳ ಅಪಪ್ರಚಾರಗಳನ್ನು ಮೀರಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ದೇಶದ ಅಭಿವೃದ್ಧಿ ಹಾಗೂ ರಕ್ಷಣೆ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ಮತದಾರರು ಚುನಾವಣೆಯಲ್ಲಿ ತೋರಿಸಿದ್ದಾರೆ.

ಸಂಸದರಾದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಯಾವ ರೀತಿ ಶ್ರಮಿಸುತ್ತೀರಿ ?

ಕೊಂಕಣ್ ರೈಲ್ವೆ ಡಬ್ಲಿಂಗ್ ಕಾಮಗಾರಿ ಹಾಗೂ ವಿದ್ಯುದ್ದೀಕರಣ, ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಶ್ರಮಿಸುತ್ತೇನೆ. ಯಜಮಾಡಿ, ಕೋಡಿ ಬಂದರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುತ್ತೇನೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ತರುತ್ತೇನೆ.‌

ಕ್ಷೇತ್ರಕ್ಕೆ ನಿರಂತರ ಭೇಟಿ ಕೊಡುತ್ತಿರಲಿಲ್ಲ ಎಂಬ ಅಪವಾದ ಇದೆ, ಮುಂದೆ ಹೇಗೆ ಕೆಲಸ ಮಾಡುತ್ತೀರಿ ?

ಕ್ಷೇತ್ರಕ್ಕೆ ನಿಗಧಿತ ದಿನ ಭೇಟಿ ಕೊಡದ ಪರಿಣಾಮ ಮತದಾರರು ಮುನಿಸಿಕೊಂಡಿದ್ದರು. ಮುಂದೆ ವಾರದಲ್ಲಿ ಒಂದು ದಿನ ಕಡ್ಡಾಯ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಭೇಟಿ ದಿನಾಂಕವನ್ನು ಮುಂಚಿತವಾಗಿ ತಿಳಿಸುತ್ತೇನೆ. ಸಾರ್ವಜನಿಕರು ಸಮಸ್ಯೆಗಳನ್ನು, ಅಹವಾಲುಗಳನ್ನು ಸಲ್ಲಿಸಬಹುದು.

ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಗಳು ಶುರುವಾಗಿದೆಯಾ ?

ಖಂಡಿತ, ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ. ಸಮ್ಮಿಶ್ರ ಸರ್ಕಾರ ಜನವಿರೋಧಿ, ರೈತ ವಿರೋಧಿಯಾಗಿದ್ದು, ಬಿದ್ದುಹೋಗಲಿದೆ. ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಖಚಿತ. ದೆಹಲಿಯಲ್ಲಿ ಮೋದಿ, ಕರ್ನಾಟಕದಲ್ಲಿ ಯಡಿಯೂರಪ್ಪ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ.

ಕರಾವಳಿಯಲ್ಲಿ ಕಮಲ ಅರಳಿದೆ, ಅದಕ್ಕೆ ಪ್ರತಿಯಾಗಿ ನಿರೀಕ್ಷೆಗಳು ಇದೆಯಾ ?

ಯಾವ ಖಾತೆಯನ್ನೂ ನಿರೀಕ್ಷೆ ಮಾಡುವುದಿಲ್ಲ. ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎಂಬುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಲಿದ್ದಾರೆ. ಅವರ ನಿರ್ಧಾರಕ್ಕೆ ಬದ್ಧ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಬಿಜೆಪಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಅದಕ್ಕೆ ಪ್ರತಿಯಾಗಿ ಪ್ರಾತಿನಿಧ್ಯ ಸಿಗುವ ನಿರೀಕ್ಷೆ ಇದೆ.

ಗೆಲುವನ್ನು ಯಾರಿಗೆ ಅರ್ಪಿಸುತ್ತೀರಿ ?

ಗೆಲುವನ್ನು ಕಾರ್ಯಕರ್ತರು ಹಾಗೂ ಮತದಾರರಿಗೆ ಅರ್ಪಿಸುತ್ತೇನೆ. ಮನೆಮನೆಗೆ ತೆರಳಿ ಕಾರ್ಯಕರ್ತರು ಮತಯಾಚನೆ ಮಾಡಿದ್ದಾರೆ. ಜನರ ಮನವೊಲಿಸಿದ್ದಾರೆ. ಅವರ ಶ್ರಮವನ್ನು ಮರೆಯುವುದಿಲ್ಲ. ಹಾಗೆಯೇ ಕರಾವಳಿಗರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಪ್ರಮೋದ್ ಮಧ್ವರಾಜ್ ಅವರ ಬಗ್ಗೆ ಏನು ಹೇಳುತ್ತೀರಿ ?

ಪ್ರಮೋದ್ ಅವರ ಬಗ್ಗೆ ಗೌರವ ಇದೆ. ಒಳ್ಳಯ ಕುಟುಂಬದಿಂದ ಬಂದವರು. ಕಾಂಗ್ರೆಸ್‌ ಯಾವ ಅನ್ಯಾಯ ಮಾಡಿರದಿದ್ದರೂ ಜೆಡಿಎಸ್‌ಗೆ ಯಾಕೆ ಬಂದರು ಎಂಬ ಪ್ರಶ್ನೆ ಕಾಡುತ್ತಿದೆ.

ಗೋಬ್ಯಾಕ್‌ ಶೋಭಾ ಬಗ್ಗೆ ಏನು ಹೇಳುತ್ತೀರಿ ?

ಕರಾವಳಿ ಬಿಜೆಪಿಯ ಗಟ್ಟಿನೆಲ. ಕೆಲವರು ಸ್ವಾರ್ಥಕ್ಕಾಗಿ ಗೋ ಬ್ಯಾಕ್ ಶೋಭಾ ಎಂದರು. ಟಿಕೆಟ್‌ ಅಪೇಕ್ಷೆ ಪಡುವುದು ತಪ್ಪಲ್ಲ. ಆದರೆ, ಟಿಕೆಟ್‌ಗಾಗಿ ಮಾಡಿದ ರಾಜಕಾರಣ ತಪ್ಪು. ಗೋ ಬ್ಯಾಕ್ ಅಂದವರಿಗೆ ಮತದಾರರು ಸೂಕ್ತ ಉತ್ತರ ಕೊಟ್ಟಿದ್ದಾರೆ. ವಿರೋಧಿಸಿದವರ ಮೇಲೆ ದ್ವೇಷದ ರಾಜಕಾರಣ ಮಾಡುವುದಿಲ್ಲ. ಒಟ್ಟಾಗಿ ಕೆಲಸ ಮಾಡಲು ಸಿದ್ಧಳಿದ್ದೇನೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !