ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮ, ಪಕ್ಷ ಮೀರಿದ ಕಾರ್ಯಕ್ರಮ ಅನುಷ್ಠಾನ: ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
Last Updated 31 ಮೇ 2022, 13:19 IST
ಅಕ್ಷರ ಗಾತ್ರ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಕಾರ್ಯಕ್ರಮಗಳ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಫಲಾನುಭವಿಗಳ ಜತೆ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನರೇಂದ್ರ ಮೋದಿ ಸರ್ಕಾರ ಜನರ ಬದುಕಿಗೆ ನೆಮ್ಮದಿ, ಸಂತೋಷ ನೀಡುವ, ಜೀವನ ಮಟ್ಟ ಸುಧಾರಿಸುವ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರ ತೆರಿಗೆ ಮೊತ್ತದ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು. ಜಾತಿ, ಧರ್ಮ, ಪಕ್ಷ ಮೀರಿದ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.

ದೇಶವನ್ನು ರಕ್ಷಣೆ, ರಸಗೊಬ್ಬರ ಹಾಗೂ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸುವ ಗುರಿ ಇದ್ದು, ಯೋಜನೆಗಳನ್ನು ರೂಪಿಸಲಾಗಿದೆ. ರಕ್ಷಣಾ ಉಪಕರಣ ಹಾಗೂ ರಸಗೊಬ್ಬರವನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಖಾದ್ಯ ತೈಲ ಬೆಳೆಗೆ ಶೇ 90 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ ಯೋಜನೆಯ ಬಗ್ಗೆ ಅನ್ಯ ದೇಶಗಳು ಅಧ್ಯಯನ ಮಾಡುತ್ತಿವೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅನುಷ್ಠಾನದಲ್ಲಿ ಪ್ರಗತಿಯಾಗಬೇಕಿದೆ. ಜಿಲ್ಲಾ ಮಟ್ಟದಲ್ಲಿ ಕೃಷಿ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಅನುಮೋದನೆಗೊಳಿಸಲಾಗುವುದು. ಕೃಷಿ ಉತ್ಪನ್ನಗಳ ದಾಸ್ತಾನಿಗೆ ಉಗ್ರಾಣಗಳ ನಿರ್ಮಾಣ, ಶೀತಲೀಕರಣಗಳ ಘಟಕಗಳ ನಿರ್ಮಾಣ, ಆಹಾರ ಗುಣಮಟ್ಟ ಪರೀಕ್ಷೆಗೆ ಲ್ಯಾಬ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಜಿಲ್ಲೆಯ ರೈತರ ಆದಾಯ ದ್ವಿಗುಣ ಸಾಧ್ಯವಾಗಲಿದೆ ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ಕೇಂದ್ರ ಸರ್ಕಾರದ ಜನಪರ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಇದ್ದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಉಜ್ವಲ ಯೋಜನೆ, ಸ್ವ ನಿಧಿ, ಗರೀಬ್ ಕಲ್ಯಾಣ್ ಅನ್ನ ಯೋಜನೆ, ಮುದ್ರಾ ಯೋಜನೆ, ಆಯುಷ್ಮಾನ್ ಭಾರತ್, ಪೋಷಣಾ ಅಭಿಯಾನ, ಜಲ ಜೀವನ್ ಮಿಷನ್ ಯೋಜನೆಗಳ ಫಲಾನುಭವಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT