ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಯಂತ್ರೋಪಕರಣಗಳ ದರ ಪ್ರದರ್ಶನಕ್ಕೆ ಶೋಭಾ ಕರಂದ್ಲಾಜೆ ಸೂಚನೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
Last Updated 5 ಆಗಸ್ಟ್ 2021, 15:54 IST
ಅಕ್ಷರ ಗಾತ್ರ

ಉಡುಪಿ: ಕೃಷಿ ಯಂತ್ರೋಪಕರಣ ಮಾರಾಟ ಮಾಡುವ ಡೀಲರ್‌ಗಳು ಕಡ್ಡಾಯವಾಗಿ ಗರಿಷ್ಟ ಮಾರಾಟ ದರ ಪ್ರದರ್ಶಿಸುವಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ರೈತರು ಖರೀದಿಸುವ ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಡೀಲರ್‌ಗಳು ಕಡ್ಡಾಯವಾಗಿ ಗರಿಷ್ಟ ಮಾರಾಟ ದರ ಪ್ರದರ್ಶಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಅದ‌ರಂತೆ ಕೃಷಿ ಯಂತ್ರೋಪಕರಣ ಉತ್ಪಾದನಾ ಕಂಪನಿಗಳು, ಮಾರಾಟ ಮಾಡುವ ಡೀಲರ್‌ಗಳು ಹಾಗೂ ಆಯಾ ರಾಜ್ಯ ಸರ್ಕಾರಗಳ ಕೃಷಿ ಇಲಾಖೆಗಳ ಅಧಿಕೃತ ವೆಬ್ ಸೈಟ್‌ಗಳಲ್ಲಿ ಕಡ್ಡಾಯವಾಗಿ ದರ ಪ್ರಕಟಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

ಕೃಷಿ ಯಂತ್ರೋಪಕರಣ ಖರೀದಿಸುವ ರೈತರಿಗೆ ನೀಡಲಾಗುವ ಸಹಾಯಧನd ಸೌಲಭ್ಯದ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ 50ರಷ್ಟು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ 90ರಷ್ಟು ಗರಿಷ್ಟ ₹ 1 ಲಕ್ಷ ಮಿತಿಗೊಳಪಟ್ಟು ಉಪಕರಣಗಳಿಗೆ ಸಹಾಯಧನ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಯಂತ್ರೋಪಕರಣಗಳ ಮಾರಾಟಗಾರರು ಮನಬಂದಂತೆ ದರ ವಿಧಿಸಿ ರೈತರಿಗೆ ವಂಚಿಸುತ್ತಿರುವ ಆರೋಪಗಳು ಕೇಳಿಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. 2014 ರಿಂದ ₹ 5,490 ಕೋಟಿ ಅನುದಾನವನ್ನು ಯೋಜನೆಯಡಿಯಲ್ಲಿ ಒದಗಿಸಲಾಗಿದ್ದು, ಕರ್ನಾಟಕ ರಾಜ್ಯಕ್ಕೆ ₹ 560.67 ಕೋಟಿ ಅನುದಾನವನ್ನು ರೈತರ ಯಂತ್ರೋಪಕರಣಗಳ ಖರೀದಿಗೆ ಮಂಜೂರು ಮಾಡಲಾಗಿದೆ.

ದೇಶದಾದ್ಯಂತ 13,23,773 ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 1,58,725 ಯಂತ್ರೋಪಕರಣಗಳನ್ನು ನೀಡಲಾಗಿದೆ. 7 ವರ್ಷಗಳ ಅವಧಿಯಲ್ಲಿ 362 ಹೈಟೆಕ್ ಹಬ್ಸ್ ನಿರ್ಮಿಸಲಾಗಿದ್ದು, ಕರ್ನಾಟಕದಲ್ಲಿ 213 ಹೈಟೆಕ್ ಹಬ್‌ಗಳ ನಿರ್ಮಾಣವಾಗಿವೆ. ರಾಜ್ಯ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕವೂ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಕೊಡಲಾಗುತ್ತಿದೆ. ಆಧುನಿಕ ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳು ಕೃಷಿ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ ರೈತರಿಗೆ ಆರ್ಥಿಕ ಬಲವನ್ನು ನೀಡುತ್ತವೆ. ಇದರಿಂದ ಬಿತ್ತನೆ, ನೀರಾವರಿ, ಕೊಯ್ಲು ಹಾಗೂ ಸಂಗ್ರಹಣೆಗೆ ಅನುಕೂಲವಾಗುತ್ತಿದೆ.

ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಾಗೂ ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹತ್ತಾರು ರೈತಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಾಫಲ್ಯತೆ ಹೊಂದಿದೆ ಎಂದು ಸಚಿವೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT