ಗುರುವಾರ , ಜುಲೈ 29, 2021
20 °C
ಬಿಜೆಪಿ 1 ವರ್ಷದ ಆಡಳಿತ ಕುರಿತು ಸಂಸದೆ

ಮೋದಿ ಕನಸಿನ ಭಾರತಕ್ಕೆ ಕೋವಿಡ್‌ ಅಡ್ಡಿ: ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 2ನೇ ಆಡಳಿತಾವಧಿಯಲ್ಲಿ ಭಾರತವನ್ನು ವಿಶ್ವದ ನಂಬರ್ 1 ದೇಶವನ್ನಾಗಿ ಮಾಡುವ ಕನಸು ಕಂಡಿದ್ದರು. ಆದರೆ, ಕೊರೊನಾ ಸೋಂಕು ದೇಶದ ಅಭಿವೃದ್ಧಿಗೆ ಹಾಗೂ ಪ್ರಧಾನಿ ಕನಸಿಗೆ ಅಡ್ಡಿಯಾಯಿತು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕೊರೊನಾ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟುಕೊಟ್ಟಿದೆ. ಆದರೂ, ಪ್ರಧಾನಿ ಮೋದಿ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತಿದ್ದಾರೆ. ಚೀನಾದಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾದಾಗಲೇ ಎಚ್ಚೆತ್ತುಕೊಂಡಿದ್ದ ಪ್ರಧಾನಿ, ವರ್ಷದ ಆರಂಭದಲ್ಲೇ ಸಭೆ ನಡೆಸಿ ಎಚ್ಚರಿಕೆ ವಹಿಸುವಂತೆ’ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದರು.

ಭಾರತದಲ್ಲಿ 130 ಕೋಟಿ ಜನರಿದ್ದರೂ, ಸೋಂಕು ಹೆಚ್ಚು ಹರಡದಂತೆ ಎಚ್ಚರವಹಿಸಲಾಗಿದೆ. ನಿರಂತರ ಲಾಕ್‌ಡೌನ್‌ ಜಾರಿಗೊಳಿಸಿ ಸಾವಿನ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲಾಗಿದೆ. ಪರಿಣಾಮ ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ ಎಂದರು.

ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಗರಿಬ್ ಕಲ್ಯಾಣ್ ಯೋಜನೆಯಡಿ ದೊಡ್ಡ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಆತ್ಮನಿರ್ಭರ್ ಭಾರತ್ ಮೂಲಕ ₹ 20 ಲಕ್ಷ ಕೋಟಿ ನೆರವು ಘೋಷಿಸಿರುವುದು ಆರ್ಥಿಕತೆಗೆ ಉತ್ತೇಜನ ನೀಡಿದಂತಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ರೈತರಿಗೆ, ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ. ಕೋವಿಡ್‌ ಸೋಂಕು ಪತ್ತೆಗೆ ದೇಶದಲ್ಲಿ 660 ಲ್ಯಾಬ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಒಂದು ಲ್ಯಾಬ್ ಇದ್ದು, ಶೀಘ್ರ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತೊಂದು ಲ್ಯಾಬ್ ನಿರ್ಮಾಣವಾಗಲಿದೆ ಎಂದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಪಕ್ಷಬೇಧ ಮಾಡದೆ ಅಭಿವೃದ್ಧಿ ಮಾಡಲಾಗಿದೆ. ಬಿಜೆಪಿ ಒಂದೂ ಕ್ಷೇತ್ರವನ್ನು ಗೆಲ್ಲದ ಕೇರಳಕ್ಕೂ ಇತರ ರಾಜ್ಯಗಳಂತೆ ಸಮಾನ ಆರ್ಥಿಕ ನೆರವು ನೀಡಲಾಗಿದೆ. ಸ್ವಚ್ಛಭಾರತ, ಜನಧನ್‌, ಉಜ್ವಲ್ ಯೋಜನೆಯ ಮೂಲಕ ಜನರಿಗೆ ನೇರವಾಗಿ ಸವಲತ್ತುಗಳು ತಲುಪಿಸಲಾಗಿದೆ. 370ನೇ ವಿಧಿ ರದ್ದು ಐತಿಹಾಸಿಕ ನಿರ್ಧಾರವಾಗಿದ್ದು, ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ. ಶಶಸ್ತ್ರಗಳ ಖರೀದಿಗೆ ಆದ್ಯತೆ ನೀಡಲಾಗಿದೆ ಎಂದರು.

ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ₹ 70 ಸಾವಿರ ಕೋಟಿ ಅನುದಾನ ಸಿಕ್ಕಿತ್ತು. ಬಿಜೆಪಿಯ ಕೇವಲ 6 ವರ್ಷಗಳ ಅವಧಿಯಲ್ಲಿ ₹ 2.19 ಲಕ್ಷ ಕೋಟಿ ಅನುದಾನ ಸಿಕ್ಕಿದೆ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಕ್ಕಿದೆ. ಕೊಂಕಣ್‌ ರೈಲ್ವೆ ವಿದ್ಯುದ್ದೀಕರಣ, ಡಬ್ಲಿಂಗ್ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಸಂಸದರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.