ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75,000 ಸಾರ್ವಜನಿಕರಿಂದ ಸಹಿ ಸಂಗ್ರಹ: ಪ್ರದರ್ಶನ

ರೈತ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್‌ನಿಂದ ಜನಾಭಿಪ್ರಾಯ ಸಂಗ್ರಹ
Last Updated 17 ನವೆಂಬರ್ 2020, 13:02 IST
ಅಕ್ಷರ ಗಾತ್ರ

ಉಡುಪಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್‌ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದು, ಜನಾಭಿಪ್ರಾಯವನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ 111 ಬೂತ್‌ಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಸಹಿಯ ಪಟ್ಟಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದ್ದು, ಶೀಘ್ರವೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿಗೆ ಸಲ್ಲಿಕೆ ಮಾಡಲಾಗುವುದು. ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರ ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿತು. ಆದರೆ, ಆ ಹಣ ಎಲ್ಲಿ ಹೋಯಿತು ಎಂಬ ಮಾಹಿತಿ ಯಾರ ಬಳಿಯೂ ಇಲ್ಲ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು, ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ₹ 2,000 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಕೋವಿಡ್‌ ತಡೆಗೆ ಸರ್ಕಾರ ಖರ್ಚು ಮಾಡಿದ ಹಣಕ್ಕೆ ಲೆಕ್ಕ ಕೇಳಿದರೆ, ಇದುವರೆಗೂ ಸಿಕ್ಕಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಪಡೆಯುವಲ್ಲಿಯೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಜನ ವಿರೋಧಿ ಕಾಯ್ದೆಗಳ ವಿರುದ್ಧ 25,000 ಜನರ ಸಹಿ ಸಂಗ್ರಹ ಗುರಿಯನ್ನು ಜಿಲ್ಲೆಗೆ ಕೊಡಲಾಗಿತ್ತು. ಇದಕ್ಕೆ ಪ್ರತಿಯಾಗಿ 75,000 ಸಹಿ ಸಂಗ್ರಹಿಸಲಾಗಿದೆ. ಇಂದಿರಾಗಾಂಧಿ ಅವರ ಜನ್ಮದಿನದಂದು ಸಹಿ ಸಂಗ್ರಹ ಅಭಿಯಾನದ ಪ್ರತಿಯನ್ನು ರಾಷ್ಟ್ರಪತಿಗೆ ಸಲ್ಲಿಕೆ ಮಾಡಲಾಗುವುದು ಎಂದರು.

ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಮಾತನಾಡಿ, ’ರಾಜ್ಯದಲ್ಲಿ ಕೊರೊನಾದಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳ ನೀತಿಗಳ ವಿರುದ್ಧ ಬ್ಲಾಕ್‌ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಯುವ ಕಾಂಗ್ರೆಸ್‌, ಸೇವಾ ದಳದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸಹಿ ಸಂಗ್ರಹ ಮಾಡಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜು ಪೂಜಾರಿ, ಬಿ.ನರಸಿಂಹ ಮೂರ್ತಿ, ರೋಶನಿ ಒಲಿವೆರಾ, ಡಾ.ಸುನಿತಾ ಶೆಟ್ಟಿ, ಗೀತಾ ವಾಗ್ಲೆ, ಉದ್ಯಾವರ ನಾಗೇಶ್ ಕುಮಾರ್, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಶಾಂತ್ ಜತ್ತನ್ನ, ಪ್ರಖ್ಯಾತ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಶಬ್ಬೀರ್ ಅಹಮದ್, ಹರೀಶ್ ಶೆಟ್ಟಿ ಪಾಂಗಳ, ರಮೇಶ್ ಕಾಂಚನ್‌, ಸೌರಭ್ ಬಲ್ಲಾಳ್ ಇದ್ದರು.

ಸಹಿ ಸಂಗ್ರಹ ಪಟ್ಟಿ ಪ್ರದರ್ಶನ

ರೈತ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ಬೂತ್ ಮಟ್ಟದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ಸಹಿಯ ಪಟ್ಟಿಯನ್ನು ಬನ್ನಂಜೆಯ ನಾರಾಯಣ ಗುರು ಸಭಾಭವನದಿಂದ ಕಲ್ಸಂಕ ವೃತ್ತದವರೆಗೂ ಪ್ರದರ್ಶನ ಮಾಡಲಾಯಿತು. ರಸ್ತೆಯ ಬದಿಯಲ್ಲಿ ಸಹಿಯ ಪಟ್ಟಿಯನ್ನು ಹಿಡಿದು ನಿಂತಿದ್ದ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ನರ್ಮ್‌ ಬಸ್‌ ನಿಲ್ದಾಣದ ಎದುರು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅವರಿಗೆ ಸಹಿ ಸಂಗ್ರಹ ಪಟ್ಟಿಯನ್ನು ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT