ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಮೌನವಾದರೆ ಪ್ರಜಾಪ್ರಭುತ್ವಕ್ಕೆ ಮಾರಕ

ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್‌.ಧರ್ಮ ಆತಂಕ
Last Updated 1 ಜುಲೈ 2019, 13:53 IST
ಅಕ್ಷರ ಗಾತ್ರ

ಉಡುಪಿ:ಆಡಳಿತ ವ್ಯವಸ್ಥೆಯ ಲೋಪ ದೋಷಗಳ ವಿರುದ್ಧ ಮಾಧ್ಯಮಗಳು ಮೌನವಾದರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್‌.ಧರ್ಮ ಆತಂಕ ವ್ಯಕ್ತಪಡಿಸಿದರು.

ಬಡಗಬೆಟ್ಟು ಕ್ರೆಡಿಟ್‌ ಕೋಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಸೋಮವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್‌ ಕ್ಲಬ್ ಉಡುಪಿ ಸಹಯೋಗಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.

ಆಡಳಿತ ವ್ಯವಸ್ಥೆಯ ವಿರುದ್ಧ ಉದ್ಯಮಿಗಳು, ಆಗರ್ಭ ಶ್ರೀಮಂತರು, ಮಠ ಮಂದಿರಗಳು ಪ್ರಶ್ನೆ ಮಾಡುವುದಿಲ್ಲ. ಪ್ರಶ್ನೆ ಮಾಡುವುದು ಮಾಧ್ಯಮ ಕ್ಷೇತ್ರ ಮಾತ್ರ ಎಂದರು.ಬದುಕಿಗೆ ನಿಜವಾದ ಅರ್ಥವನ್ನು ಕಲ್ಪಿಸಿಕೊಟ್ಟಿರುವುದು ಮಾಧ್ಯಮ ಮಾತ್ರ ಎಂದು ಅಭಿಪ್ರಾಯಪಟ್ಟರು.

ಸಮಾಜದ ಜ್ವಲಂತ ಸಮಸ್ಯೆಗಳಾದ ಬಡತನ, ನೋವು, ಸಾಮಾಜಿಕ ಅಸಮಾನತೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯದಂತಹ ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುವ ಮೂಲಕ ನ್ಯಾಯ ಕೊಡಿಸುವಂತಹ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಪ್ರಜಾಪ್ರಭುತ್ವ ಬಲಯುತವಾಗಬೇಕಾದರೆ ಪ್ರಶ್ನೆ ಮಾಡುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜ ಸರಿದಾರಿಯಲ್ಲಿ ಸಾಗಲು, ಸರ್ಕಾರ ಸಮರ್ಥವಾಗಿ ಕೆಲಸ ಮಾಡಲು ಮಾಧ್ಯಮ ರಂಗ ನಿರಂತರವಾಗಿ ಪ್ರಶ್ನೆ ಮಾಡಬೇಕು. ಇದಕ್ಕೆ ವ್ಯತಿರಿಕ್ತವಾಗಿ ಯುವ ಸಮುದಾದಯ ಪ್ರಶ್ನೆ ಮಾಡುವುದನ್ನು ಮರೆಯುತ್ತಿರುವುದು ಆತಂಕಕಾರಿ ವಿಚಾರ ಎಂದರು.

ಮೂಲಭೂತವಾದದ ಬಗ್ಗೆ ಪ್ರಶ್ನೆಗಳನ್ನು ಎತ್ತಬೇಕು. ಅನುಕೂಲಗಳ ಹಿಂದಿನ ಅನಾನುಕೂಲಗಳನ್ನು ಗುರುತಿಸಿ, ಜನರ ಮುಂದಿಡಬೇಕು. ಆದರೆ, ಅಂತಹ ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಪ್ರಶ್ನೆಕೇಳದ ವ್ಯವಸ್ಥೆ ಅತ್ಯಂತ ಮೂರ್ಖತನದ್ದು ಎಂದರು.

ಕೊಡಗು, ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಆತಂಕಗಳಿವೆ. ಇಂತಹ ಆತಂಕಗಳನ್ನು ನಿವಾರಿಸುವ ಕೆಲಸವನ್ನು ಮಾಧ್ಯಮ ಮಾಡಬೇಕು. ಸಮಾಜದಲ್ಲಿ ಪರಸ್ಪರ, ಪ್ರೀತಿ, ಗೌರವ, ನಂಬಿಕೆಯನ್ನು ರೂಪಿಸುವಂತಹ ಕೆಲಸ ಆಗಬೇಕು ಎಂದು ಧರ್ಮ ಅಭಿಪ್ರಾಯಪಟ್ಟರು.

ಹಿರಿಯ ಪತ್ರಿಕಾ ಛಾಯಾಗ್ರಹಕ ಜಿ.ಕೆ.ಹೆಗ್ಡೆ ಮಾತನಾಡಿ, ಪತ್ರಿಕಾ ಬರಹಗಳಷ್ಟೆ ಛಾಯಾಚಿತ್ರಗಳೂ ಮುಖ್ಯವಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ ಒಂದು ಚಿತ್ರ ಇಡೀ ಘಟನೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಛಾಯಾಚಿತ್ರ ಕಲೆಯನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇವೇಳೆ ಆಯ್ದ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಸಂವಾದ ನಡೆಸಲಾಯಿತು.

ಬಡಗಬೆಟ್ಟು ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಾಧ್ಯಮ ಕ್ಷೇತ್ರದ ಯಶಸ್ಸು, ಪತ್ರಕರ್ತರಿಂದ ಹಿಡಿದು, ಪತ್ರಿಕೆ ಮಾರಾಟ ಮಾಡುವ, ಪತ್ರಿಕೆಯನ್ನು ಕೊಂಡು ಓದುವ ಓದುಗನ ಮೇಲೆ ಅವಲಂಬಿಸಿದೆ. ಮೂರು ವರ್ಗಗಳ ನಡುವೆ ಸಮನ್ವಯತೆ ಇದ್ದರೆ ಯಶಸ್ಸು ಸಾಧ್ಯ ಎಂದರು.

ಇದೇವೇಳೆ ಪತ್ರಿಕೆ ವಿತರಕರಾದ ಖಲೀಲ್ ಮಹಮ್ಮದ್ ಕಾರ್ಕಳ, ಹಿರಿಯ ಪತ್ರಕರ್ತ ಗೋಪಕುಲ್‌ದಾಸ್‌ ಪೈ ಹಾಗೂ ಲಕ್ಷ್ಮಿ ಮಚ್ಚಿನ ಅವರನ್ನು ಸನ್ಮಾನಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು, ಸುಭಾಶ್‌ಚಂದ್ರ ವಾಗ್ಳೆ, ನಾಗರಾಜ್‌ ವರ್ಕಾಡಿ, ದಿವಾಕರ್ ಹಿರಿಯಡ್ಕ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT