ಉಡುಪಿ: ಕಾರ್ಕಳ ತಾಲ್ಲೂಕಿನ ನಂದಳಿಕೆಯ ಮಹಾಲಿಂಗೇಶ್ವರ ದೇವಾಲಯದಲ್ಲಿ ಏ.6ರಂದು ಅದ್ಧೂರಿಯಾಗಿ ನಂದಳಿಕೆ ಅಯನೋತ್ಸವ, ಸಿರಿಜಾತ್ರಾ ಮಹೋತ್ಸವ ಹಾಗೂ ರಾಶಿಪೂಜೆ ಮಹೋತ್ಸವ ನಡೆಯುತ್ತಿದೆ.
ಪ್ರತಿ ವರ್ಷವೂ ವಿಭಿನ್ನವಾದ ಪ್ರಚಾರ ತಂತ್ರ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಸಿರಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರನ್ನು ಸೆಳೆಯುವ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ಗಿಟ್ಟಿಸಿರುವ ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಈ ವರ್ಷವೂ ವಿಭಿನ್ನ ಪ್ರಚಾರದ ಮೊರೆ ಹೋಗಿದ್ದಾರೆ.
ಈ ಬಾರಿಯ ಸಿರಿ ಜಾತ್ರಾ ಮಹೋತ್ಸವದ ಪ್ರಚಾರ ಫಲಕಗಳನ್ನು ಪಕ್ಷಿಗಳಿಗೆ ನೀರುಣಿಸುವ ಮಣ್ಣಿನ ಪಾತ್ರೆಯನ್ನೊಳಗೊಂಡಿರುವ ಕಂಬದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಸುಮಾರು ಎರಡು ಅಡಿ ಎತ್ತರವಿರುವ ರಟ್ಟಿನಿಂದ ತಯಾರಿಸಲಾಗಿರುವ ಪ್ರಚಾರ ಫಲಕ ಪಕ್ಷಿ ಪ್ರೇಮಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹಕ್ಕಿಗಳಿಗೆ ನೀರುಣಿಸುವ ಕಂಬದ ಮಾದರಿಯ ವಿಭಿನ್ನ ಪ್ರಚಾರ ಫಲಕವು ಬೇಸಗೆಯಲ್ಲಿ ಪಕ್ಷಿಗಳ ದಾಹ ತಣಿಸುವುದರ ಜತೆಗೆ ಸಿರಿ ಜಾತ್ರೆಗೆ ಬರುವಂತೆ ಭಕ್ತರಿಗೆ ಆಹ್ವಾನ ನೀಡುತ್ತಿದೆ. ಈ ಹಿಂದೆ ನಂದಳಿಕೆ ಅಯನೋತ್ಸವ, ಸಿರಿ ಜಾತ್ರಾ ಮಹೋತ್ಸವ, ರಾಶಿ ಪೂಜಾ ಮಹೋತ್ಸವ ವಿಭಿನ್ನ ಪ್ರಚಾರದ ಕಾರಣಕ್ಕೆ ಸುದ್ದಿಯಾಗಿತ್ತು.
ಸಿರಿಜಾತ್ರೆಯ ಆಹ್ವಾನ ಫಲಕಗಳನ್ನು ಮೈಲುಗಲ್ಲು, ಅಂಚೆ ಕಾರ್ಡ್, ಮಾವಿನ ಎಲೆ, ಛತ್ರಿ, ಗೋಣಿಚೀಲ, ಮಾಸ್ಕ್, ಫೋಟೊ ಫ್ರೇಮ್ ಮಾದರಿಯಲ್ಲಿ ಸಿದ್ಧಪಡಿಸಿ ಜಿಲ್ಲೆಯಾದ್ಯಂತ ಹಾಕಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆತಿತ್ತು.
ಈ ಬಾರಿ ಬೇಸಗೆಯ ಪ್ರಖರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ನೀರಿನ ಅಭಾವ ಎದುರಾಗಬಾರದು ಎಂಬ ದೃಷ್ಟಿಯಿಂದ ಮಣ್ಣಿನ ಪಾತ್ರೆಯೊನ್ನಳಗೊಂಡಿರುವ ಕಂಬದ ಮಾದರಿಯ ಪ್ರಚಾರ ಫಲಕಗಳನ್ನು ಸಿದ್ಧಪಡಿಸಲಾಗಿದೆ. ಒಂದು ಫಲಕಕ್ಕೆ ₹ 130 ವೆಚ್ಚಾಗಿದ್ದು 1,500ಕ್ಕೂ ಹೆಚ್ಚು ತಯಾರಿಸಲಾಗಿದೆ ಎಂದು ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಮಾಹಿತಿ ನೀಡಿದರು.
ಸಿದ್ಧಾಪುರದಲ್ಲಿ ಮಣ್ಣಿನ ಪಾತ್ರೆಗಳನ್ನು ತಯಾರಿಸಿದರೆ, ಕಂಬದ ಮಾದರಿ ಬೆಂಗಳೂರಿನಲ್ಲಿ ಸಿದ್ಧವಾಗಿದೆ. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ ಮುಂಗಟ್ಟುಗಳ ಮುಂದೆ, ಮನೆಗಳ ಮುಂದೆ ಫಲಕಗಳನ್ನಿಡುವ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ವರ್ಷ ಫಲಕಗಳನ್ನು ಪಡೆದವರು ಈ ವರ್ಷವೂ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಆಟೋ ಸ್ಟಾಂಡ್‌ಗಳಿಂದ ಹೆಚ್ಚಿನ ಬೇಡಿಕೆ ಬಂದಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಿಗೂ ಪ್ರಚಾರ ಫಲಕಗಳನ್ನು ಹಂಚಲಾಗಿದೆ. ಸಾರ್ವಜನಿಕರು ಮಣ್ಣಿನ ಪಾತ್ರೆಗೆ ಪ್ರತಿದಿನ ನೀರು ಹಾಕುವ ಮೂಲಕ ಹಕ್ಕಿ ಪಕ್ಷಿಗಳ ದಾಹ ತಣಿಸಬೇಕು. ನಂದಳಿಕೆಯ ಸಿರಿ ಜಾತ್ರೆಯಲ್ಲೂ ಭಾಗವಹಿಸಬೇಕು ಎಂದು ಸುಹಾಸ್ ಹೆಗ್ಡೆ ಮನವಿ ಮಾಡಿದರು.
ನಂದಳಿಕೆಯ ಸಿರಿ ಜಾತ್ರೆ ತುಳುನಾಡಿನ ಆಚರಣೆಗಳಿಗೆ ಪ್ರಸಿದ್ಧವಾಗಿದೆ. ಆದಿ ಆಲಡೆ, ಸಿರಿ ಕ್ಷೇತ್ರ, ಸಿರಿಗಳ ಮೂಲ ಕ್ಷೇತ್ರ, ನಾಲ್ಕು ಸ್ಥಾನ ನಂದಳಿಕೆಯಾಗಿ ಸದ್ಯದ ಸಿರಿ ವರಪುಣ್ಯ ಕ್ಷೇತ್ರವಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದೆ. ಈ ಬಾರಿಯ ಸಿರಿಯಲ್ಲೂ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಅನಾವರಣವಾಗಲಿದ್ದು ಭಕ್ತರು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.