ಸೋಮವಾರ, ಏಪ್ರಿಲ್ 19, 2021
32 °C
9 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಕೊರಗರು: ರವೀಂದ್ರನಾಥ್ ಶಾನುಭಾಗ್

ಹಕ್ಕುಪತ್ರ ಸಿಕ್ಕರೂ ನಿವೇಶನ ಹಂಚಿಕೆ ಮಾಡಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೊಂಡಾಡಿಯ ಕೊರಗ ಸಮುದಾಯದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ 9 ವರ್ಷ ಕಳೆದರೂ ನಿವೇಶನ ಹಂಚಿಕೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ಶಾನುಭಾಗ್ ಆರೋಪಿಸಿದರು.

ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 2010ರಲ್ಲಿ ಬೊಮ್ಮರಬೆಟ್ಟು ಗ್ರಾಮದ 229ನೇ ಸರ್ವೇ ನಂಬರ್‌ನಲ್ಲಿರುವ 2.61 ಎಕರೆ ಜಮೀನನ್ನು ಜಿಲ್ಲಾಡಳಿತ ಕೊರಗ ಸಮುದಾಯದ ನಿವೇಶನಕ್ಕೆ ಕಾಯ್ದಿರಿಸಿತ್ತು. 

2011ರ ಸ್ವತಂತ್ರ ದಿನಾಚರಣೆಯಂದು 23 ಕೊರಗ ಕುಟುಂಬಗಳಿಗೆ ಹಾಗೂ 6 ಗಿರಿಜನ ಕುಟುಂಬಗಳಿಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ನಿವೇಶನಗಳ ಹಕ್ಕು ಪತ್ರ ಕೂಡ ವಿತರಿಸಿದ್ದರು. ಆದರೆ, ಇದುವರೆಗೂ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಶಾನುಭಾಗ್ ಆರೋಪಿಸಿದರು.

ನಿವೇಶನ ಹಂಚಿಕೆ ಮಾಡಿ ಎಂದು ಅಧಿಕಾರಿಯಿಂದ ಮುಖ್ಯಮಂತ್ರಿಯವರೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸರಣಿ ಪ್ರತಿಭಟನೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಹಕ್ಕುಪತ್ರ ಇದ್ದರೂ ಕೊರಗ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಮಾಡಬೇಕಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೊರಗರಿಗೆ ಮೀಸಲಿಟ್ಟ ಪ್ರದೇಶ ಮನೆ ಕಟ್ಟಿಕೊಳ್ಳಲು ಯೋಗ್ಯವಾಗಿಲ್ಲ. ಜಾಗ ಸಮತಟ್ಟಾಗಿಲ್ಲ. ಒಂದು ಕಡೆ ಗುಡ್ಡ, ಮತ್ತೊಂದು ಕಡೆ ಇಳಿಜಾರು ನಿರ್ಮಿಸಲಾಗಿದೆ. ಪರಿಣಾಮ ಈಚೆಗೆ ಸುರಿದ ಮಳೆಗೆ ಗುಡ್ಡ ಬಿರುಕುಬಿಟ್ಟಿದ್ದು ಕುಸಿಯುವ ಭೀತಿ ಎದುರಾಗಿದೆ.

18 ತಿಂಗಳ ಹಿಂದೆ ಮಣಿಪಾಲ ವಿವಿ ವಿದ್ಯಾರ್ಥಿಗಳು ನಿವೇಶನಕ್ಕೆ ಮೀಸಲಿಟ್ಟ ಜಾಗವನ್ನು ಸ್ವಚ್ಛಗೊಳಿಸಿದ್ದರು. ಆಗ ಮನೆಕಟ್ಟಲು ಜಾಗ ಯೋಗ್ಯವಾಗಿತ್ತು. ಆದರೆ, ಜಿಲ್ಲಾಡಳಿತ ಮೂಲಸೌಕರ್ಯ ಒದಗಿಸುವುದಾಗಿ ಹೇಳಿ ₹ 50 ಲಕ್ಷ ವ್ಯಯಿಸಿ ಮೂರು ಹಂತಗಳಲ್ಲಿ ಜಾಗವನ್ನು ಸಮತಟ್ಟು ಮಾಡಲು ಹೋಗಿ, ಗುಡ್ಡಗಳನ್ನು ನಿರ್ಮಿಸಿದೆ. ಪರಿಣಾಮ ಅವು ಕುಸಿಯುವ ಆತಂಕ ಎದುರಾಗಿದೆ. ಕಾಮಗಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು ತನಿಖೆ ನಡೆಯುತ್ತಿದೆ ಎಂದರು.

ನಿವೇಶನದ ಜಾಗ ಮನೆಕಟ್ಟಲು ಯೋಗ್ಯವಾಗಿಲ್ಲ. ಹಾಗಾಗಿ, 15 ದಿನಗಳಲ್ಲಿ ಜಾಗವನ್ನು ಸಮತಟ್ಟು ಮಾಡಿ ನಿವೇಶನ ಅಳೆದು ಹಂಚಿಕೆ ಮಾಡಬೇಕು. ಇಲ್ಲವಾದರೆ, ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗುವುದು ಎಂದು ಶಾನುಭಾಗ್ ಎಚ್ಚರಿಕೆ ನೀಡಿದರು.

ಈ ಸಂದರ್ಭ ಜುಬೇದಾ, ಮಹಾಲಕ್ಷ್ಮಿ ಸೇರಿದಂತೆ ಕೊರಗ ಸಮುದಾಯದ ಹಲವು ಮಹಿಳೆಯರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.