ಶುಕ್ರವಾರ, ಮೇ 29, 2020
27 °C
ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮ

‘ತುರ್ತು ಸಂದರ್ಭ ನೆರವಿಗೆ ಬರುವ ಸೈನಿಕರಿದ್ದಂತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್‌ ಇಲಾಖೆ ಜತೆ ಕೈ ಜೋಡಿಸಿದೆ ಎಂದು ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ವಸಂತ ಕುಮಾರ್‌ ಹೇಳಿದರು.

ಜಿಲ್ಲಾ ಗೃಹ ರಕ್ಷಕ ದಳ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆಂತರಿಕ ಭದ್ರತೆ ಕಾಪಾಡಲು 'ಗೃಹ ರಕ್ಷಕ ದಳ' ಎಂಬ ಸ್ವಯಂ ಸೇವಕರ ತಂಡ ಅಸ್ತಿತ್ವಕ್ಕೆ ಬಂತು. ಗೃಹರಕ್ಷಕ ದಳವು ದೇಶ ಸೇವೆಗಾಗಿ ಜೀವನವನ್ನೇ ಮುಡುಪಾಗಿಟ್ಟಿದೆ ಎಂದರು.

ಗೃಹ ರಕ್ಷಕ ಸಿಬ್ಬಂದಿಗೆ ಹಲವು ಸಮಸ್ಯೆಗಳಿದ್ದರೂ ಕರ್ತವ್ಯದ ವಿಚಾರದಲ್ಲಿ ಅಸಡ್ಡೆ ತೋರುವುದಿಲ್ಲ. ಸಭೆ, ಸಮಾರಂಭ, ಉತ್ಸವ, ರಾಷ್ಟ್ರೀಯ ಹಬ್ಬಗಳು, ಚುನಾವಣೆ, ಭದ್ರತೆ ಸೇರಿದಂತೆ ಎಲ್ಲ ಕೆಲಸಗಳಲ್ಲೂ ಭಾಗಿಯಾಗುತ್ತಾರೆ. ಯಾವುದೇ ಕೆಲಸವಾದರೂ ಶಿಸ್ತು ಹಾಗೂ ಶ್ರದ್ಧೆಯಿಂದ ಮಾಡುತ್ತಾರೆ ಎಂದರು.

ಜಿಲ್ಲೆಯಲ್ಲಿರುವ ಗೃಹ ರಕ್ಷಕ ಸಿಬ್ಬಂದಿ ನಿತ್ಯವೂ ಪೊಲೀಸ್‌ ಇಲಾಖೆಗೆ ಎರವಲು ಸೇವೆ ನೀಡುತ್ತಿದ್ದಾರೆ. ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸಲು, ಸುಗಮ ಸಂಚಾರ ವ್ಯವಸ್ಥೆಗೆ, ಬಂದೋಬಸ್ತ್‌ ಕಾರ್ಯದಲ್ಲಿ ಪೊಲೀಸರಿಗೆ ಸಾಥ್ ನೀಡುತ್ತಿದ್ದಾರೆ. ಆರ್‌.ಟಿ.ಒ, ಕಾರಾಗೃಹ, ಅಗ್ನಿಶಾಮಕ ಸೇವೆಗಳಲ್ಲೂ ಹೋಂಗಾರ್ಡ್ಸ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದರು.

ಗೃಹ ರಕ್ಷಕರು ತುರ್ತು ಸಂದರ್ಭದಲ್ಲಿ ನೆರವಿಗೆ ಬರುವ ಸೈನಿಕರಿದ್ದಂತೆ. ಅವರಿಗೆ ನಿರ್ಧಿಷ್ಟ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬ ಕಾನೂನು ಇಲ್ಲ. ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಕೈ ಜೋಡಿಸಿ ಸೇವೆ ನೀಡುತ್ತಾರೆ. ಮುಂಬೈ ಭಯೋತ್ಪಾದಕ ದಾಳಿ ನಡೆದಾಗ ದಾಳಿಯ ಮಾಹಿತಿಯನ್ನು ಪೊಲೀಸ್‌ ಇಲಾಖೆಗೆ ನೀಡಿದ್ದು ಗೃಹ ರಕ್ಷದಳದ ಸಿಬ್ಬಂದಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯುಟಿ ಕಮಾಂಡೆಂಟ್‌ ರಮೇಶ್, ಪಡುಬಿದ್ರಿ ಘಟಕಾಧಿಕಾರಿ ನವೀನ್‌ ಕುಮಾರ್‌, ಕಾಪು ಪ್ರಭಾರ ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್‌, ಬ್ರಹ್ಮಾವರ ಘಟಕದ ಸ್ಟೀವನ್‌ ಫ್ಲಕ್‌ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಮಾಂಡೆಂಟ್‌ ಡಾ.ಕೆ.ಪ್ರಶಾಂತ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬ್ರಹ್ಮಾವರ ಘಟಕಾಧಿಕಾರಿ ಮಂಜುನಾಥ ಶೆಟ್ಟಿಗಾರ್‌ ವಂದಿಸಿದರು, ಸಾಯಿನಾಥ್‌ ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.