ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಹಲೋಕದ ಹಾಡು ಮುಗಿಸಿದ ಧಾರೇಶ್ವರ

ಯಕ್ಷರಂಗ ಪ್ರವೇಶಿಸಿದ್ದೇ ಆಕಸ್ಮಿಕ, ‘ಕರಾವಳಿ ಕೋಗಿಲೆ’ ಎಂದು ಪ್ರಸಿದ್ಧ
Published 26 ಏಪ್ರಿಲ್ 2024, 7:14 IST
Last Updated 26 ಏಪ್ರಿಲ್ 2024, 7:14 IST
ಅಕ್ಷರ ಗಾತ್ರ

ಕುಂದಾಪುರ: ನಾಲ್ಕೂವರೆ ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಇಂಪಾದ ಧ್ವನಿ ಮೂಲಕ ಯಕ್ಷಗಾನಾಸಕ್ತರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿದ್ದ ಬಡಗುತಿಟ್ಟು ಯಕ್ಷಗಾನ ಶೈಲಿಯ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು.

1957 ಸೆ.5ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಧಾರೇಶ್ವರರು ‘ಕರಾವಳಿ ಕೋಗಿಲೆ’ ಎಂದೇ ಪ್ರಸಿದ್ಧರಾದವರು. ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದ್ದ ಅವರು, ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದರು. ಗೋಕರ್ಣದಲ್ಲಿ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದ ಧಾರೇಶ್ವರರು ಯಕ್ಷಗಾನದೆಡೆ ಆಕರ್ಷಿತರಾದರು.

1980ರ ದಶಕದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಮೇಳಗಳಲ್ಲಿ ಒಂದಾಗಿದ್ದ ಕೋಟ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸಕ್ಕೆ ಸೇರಿದ ಅವರು, ದಿನವೆಲ್ಲಾ ಮೈಕ್ ಹಿಡಿದು ಮೇಳದ ಪ್ರಚಾರ ಕೆಲಸ ಮಾಡುತ್ತಾ ರಾತ್ರಿ ರಂಗಸ್ಥಳದ ವಿದ್ಯುತ್ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಸಂಗೀತದ ಬಗ್ಗೆ ಅವರಿದ್ದ ಅಪಾರ ಆಸಕ್ತಿ ಗಮನಿಸಿದ ಯಕ್ಷಗಾನ ಗುರುಗಳು ಹಾಗೂ ಭಾಗವತರಾದ ನಾರ್ಣಪ್ಪ ಉಪ್ಪೂರರ ಪ್ರೇರಣೆ, ಪ್ರೋತ್ಸಾಹದಿಂದ ಯಕ್ಷಗಾನ ಕೇಂದ್ರ ಸೇರಿದರು. ಯಕ್ಷಗಾನದ ಒಂದೊಂದೇ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಗುರು ಉಪ್ಪೂರವರ ಒತ್ತಾಸೆ, ಮಾರ್ಗದರ್ಶನದಲ್ಲಿ ಸಂಗೀತಗಾರರಾಗಿ ವೃತ್ತಿ ಸೇವೆ ಆರಂಭಿಸಿದ ಧಾರೇಶ್ವರರು ಅಮೃತೇಶ್ವರಿ ಮೇಳದಲ್ಲಿ ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮುಂದೆ ಎರಡನೆಯ ಭಾಗವತರಾಗಿ ಬಳಿಕ ಪ್ರಧಾನ ಭಾಗವತರಾಗಿ ಅವರ ಯಕ್ಷಗಾನ ಜೈತ್ರಯಾತ್ರೆ ಮುಂದುವರಿಯಿತು.

ಬಡಗುತಿಟ್ಟಿನ ಪ್ರಸಿದ್ಧ ಪೆರ್ಡೂರು ಮೇಳಕ್ಕೆ ಭಾಗವತರಾಗಿ ಸೇರಿ ವೃತ್ತಿ ಆರಂಭಿಸಿದ ಅವರು, ಅದ್ಭುತವಾದ ಕಂಠಸಿರಿಯಿಂದಲೇ ದೊಡ್ಡ ಸಂಖ್ಯೆಯ ಶೋತೃಗಳನ್ನು ಗಳಿಸಿಕೊಂಡಿದ್ದರು. ನಾಲ್ಕೂವರೆ ದಶಕಗಳ ಕಾಲ ಯಕ್ಷ ಸೇವೆ ಸಲ್ಲಿಸಿದ್ದ ಧಾರೇಶ್ವರರು ಬೇಡಿಕೆ ಇದ್ದಾಗಲೇ ಸಾಕು ಎಂದು ತಿರುಗಾಟ ನಿಲ್ಲಿಸಿದ್ದರು. ನೆಚ್ಚಿನ ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ ಅವರ ಒತ್ತಾಸೆಗಾಗಿ 1 ವರ್ಷ ಮತ್ತೆ ಸೇವೆ ಸಲ್ಲಿಸಿದ್ದರು.

ಸುದೀರ್ಘ 28 ವರ್ಷಗಳ ತಿರುಗಾಟದಿಂದ ವಿಶ್ರಾಂತಿ ತೀರ್ಮಾನ ಮಾಡಿದ ಅವರು, ‘ಧಾರೇಶ್ವರ ಚಾರಿಟಬಲ್ ಟ್ರಸ್ಟ್’ ಮೂಲಕ ಯಕ್ಷಗಾನ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿದ್ದು, ನೂರಾರು ಸನ್ಮಾನಗಳು ಅವರ ಕೀರ್ತಿ ಕಿರೀಟಕ್ಕೆ ಸೇರಿವೆ.

ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳ ಪ್ರಯೋಗದ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಎಲ್ಲವೂ ಸಂಗೀತದ ಪ್ರಾಕಾರಗಳೇ ಎನ್ನುವ ಸೌಮ್ಯ ಸಮರ್ಥನೆ ಇತ್ತು. ಬಡಗುತಿಟ್ಟಿನ ಯಕ್ಷಲೋಕದಲ್ಲಿ ಕುಂಜಾಲು, ಉಪ್ಪೂರು ಎಂಬ ಶೈಲಿಯಲ್ಲಿ ಹಾಡುತ್ತಿದ್ದವರು ನಾವಡ ಹಾಗೂ ಧಾರೇಶ್ವರರು ಮಾತ್ರ ಎನ್ನುವ ಮಾತುಗಳು ಚಾಲ್ತಿಯಲ್ಲಿದ್ದವು. ಕಾಳಿಂಗ ನಾವಡರು ಮರೆಯಾದಾಗ ಬಡಗುತಿಟ್ಟು ರಂಗಕ್ಕೆ ಇಂಪಿನ ಕಂಠದ ಮೆರುಗು ನೀಡಿದವರು ಧಾರೇಶ್ವರ.

ಬೈಂದೂರು ಸಮೀಪದ ನಾಗೂರಿನಲ್ಲಿ ಮನೆ ಮಾಡಿಕೊಂಡಿದ್ದ ಅವರು, ಟ್ರಸ್ಟ್ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅನಾರೋಗ್ಯ, ಚಿಕಿತ್ಸೆ ಕಾರಣದಿಂದ ಬೆಂಗಳೂರಿನ ಪುತ್ರನ ಮನೆಯಲ್ಲಿ ಉಳಿದುಕೊಂಡಿದ್ದರು. ಗುರುವಾರ ಬೆಳಿಗ್ಗೆ ಧಾರೇಶ್ವರ ಅವರ ಅಸ್ತಂಗತ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ. ಯಕ್ಷಲೋಕದ ಪ್ರಯೋಗಶೀಲ ಸಂಗೀತ ಮಾಂತ್ರಿಕನ ಸುದೀರ್ಘ ಒಡನಾಟದ ಕೊಂಡಿ ಶಾಶ್ವತವಾಗಿ ಕಳಚಿದೆ. ಧಾರೇಶ್ವರರು ಇನ್ನು ನೆನಪು ಮಾತ್ರ.

ಅಂತ್ಯಕ್ರಿಯೆ:

ಗುರುವಾರ ಸಂಜೆ ಬೆಂಗಳೂರಿನಿಂದ ತರಲಾದ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ನಾಗೂರಿನ ಅವರ ಮನೆಯಲ್ಲಿ ಇರಿಸಲಾಗಿತ್ತು. ರಾತ್ರಿ ಗೋಕರ್ಣದಿಂದ ಬಂದಿದ್ದ ಕುಟುಂಬ ಪುರೋಹಿತರ ಮಾರ್ಗದರ್ಶನದಲ್ಲಿ ಪುತ್ರ ಕಾರ್ತಿಕ್ ಧಾರೇಶ್ವರ ಅಂತಿಮ ವಿಧಿವಿಧಾನ ಪೂರೈಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.

ಶಾಸಕ ಗುರುರಾಜ್ ಗಂಟಿಹೊಳೆ, ಯಕ್ಷಗಾನ ಅಕಾಡೆಮಿ ನಿಯೋಜಿತ ಅಧ್ಯಕ್ಷ ತಲ್ಲೂರು ಶಿವರಾಂ ಶೆಟ್ಟಿ, ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಡಗು ಹಾಗೂ ತೆಂಕುತಿಟ್ಟಿನ ಕಲಾವಿದರು ಸೇರಿದಂತೆ ನೂರಾರು ಮಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಪಾರಂಪರಿಕ ಶೈಲಿಗೆ ಶಾಸ್ತ್ರೀಯ ಸಂಗೀತದ ಸ್ಪರ್ಶ
ಯಕ್ಷಗಾನದ ಪಾರಂಪರಿಕ ಶೈಲಿಗೆ ಶಾಸ್ತ್ರೀಯ ಸಂಗೀತದ ಸ್ಪರ್ಶ ನೀಡಿ ಹೊಸ ಅನ್ವೇಷಣೆ ಮೂಲಕ ಹೊಸ ರಾಗಗಳನ್ನು ಪರಿಚಯಿಸಿ ಧಾರೇಶ್ವರರ ಹಾಡುಗಳಿಗೆ ಸಾಕಷ್ಟು ಬೇಡಿಕೆಯೂ ಇತ್ತು. ಅವರ ಧ್ವನಿಯಲ್ಲಿ ಯಕ್ಷಗಾನ ದಾಸರ ಪದಗಳು ಬಸವಣ್ಣ ಚನ್ನಮಲ್ಲಿಕಾರ್ಜುನ ಗೀತೆಗಳು ಕುವೆಂಪು ಬೇಂದ್ರೆ ಭಾವಗೀತೆ ಸೇರಿದಂತೆ 450ಕ್ಕೂ ಅಧಿಕ ಧ್ವನಿಸುರುಳಿಗಳು ಹೊರಬಂದಿವೆ. ಹೊಸ ಪ್ರಸಂಗಗಳಿಗೆ ನಿರ್ದೇಶನದ ಉಸ್ತುವಾರಿ ವಹಿಸುತ್ತಿದ್ದ ಅವರು 300ಕ್ಕೂ ಅಧಿಕ ಪ್ರಸಂಗಳನ್ನು ನಿರ್ದೇಶಿಸಿದ್ದರು. ಧಾರೇಶ್ವರರ ಕಂಠದಲ್ಲಿ ಹೊರಬಂದಿದ್ದ ಅಮೃತವರ್ಷಿಣಿ ಸಿಂಧೂರ ಭಾಗ್ಯ ಬ್ರಹ್ಮಕಪಾಲ ರಕ್ತ ತಿಲಕ ಶೂದ್ರ ತಪಸ್ವಿನಿ ಚಾರು ಚಂದ್ರಿಕೆ ಗಗನ ಗಾಮಿನಿ ವಸಂತ ಸೇನೆ ಮುಂತಾದ ಪ್ರಸಂಗಗಳು ಯಕ್ಷರಸಿಕರಿಂದ ಮೆಚ್ಚುಗೆ ಪಡೆದುಕೊಂಡಿದ್ದವು. ಕಂದಾವರ ರಘುರಾಮ ಶೆಟ್ಟಿ ಅವರು ರಚಿಸಿದ್ದ ಶೂದ್ರ ತಪಸ್ವಿನಿ ಪ್ರಸಂಗದ ಕೊರವಂಜಿ ಹಾಡು ಇಂದಿಗೂ ಜನಜನಿತ.
ಬಡಗುತಿಟ್ಟಿನ ಖ್ಯಾತ ಭಾಗವತ
ಸುಬ್ರಹ್ಮಣ್ಯ ಧಾರೇಶ್ವರ (67) ಅವರ ಹಠಾತ್ ನಿಧನ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ. ಯಕ್ಷಗಾನದ್ಲಿ ಹೊಸ ಪ್ರಯೋಗಗಳ ಮೂಲಕ ಯಕ್ಷ ಪ್ರೇಮಿಗಳ ಮನದಂಗಳದಲ್ಲಿ ರಾರಾಜಿಸಿದ್ದ ಧಾರೇಶ್ವರರು ಕಾಳಿಂಗ ನಾವಡರ ಅಗಲುವಿಕೆಯ ಬಳಿಕ‌ ಉಂಟಾಗಿದ್ದ ನಿರ್ವಾತವನ್ನು ತುಂಬುವ ಮಟ್ಟಿಗೆ ಬೆಳೆದಿರುವುದು ಇತಿಹಾಸ. ಸುಬ್ರಹ್ಮಣ್ಯ ಧಾರೇಶ್ವರರೊಂದಿಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಧಾರೇಶ್ವರ ಯಕ್ಷ ಅಷ್ಟಾಹವನ್ನು ಒಂದು ದಶಕಗಳ ಕಾಲ ನಡೆಸಿದ ಸಂತ್ರಪ್ತಿ ಇದೆ. ಅವರಿಂದ ಯಕ್ಷಗಾನ ಲೋಕಕ್ಕೆ ಇನ್ನಷ್ಟು ಸೇವೆ ಕೊಡುಗೆ ಹರಿದು ಬರುವ ಸಂದರ್ಭದಲ್ಲಿಯೇ ಅವರ ಹಠಾತ್ ಅಗಲುವಿಕೆ ಯಕ್ಷ ಪ್ರೇಮಿಗಳಿಗೆ ಮರೆಯಲಾಗದ ನೋವು ತಂದಿದೆ. –ಡಾ.ತಲ್ಲೂರು ಶಿವರಾಮ ಶೆಟ್ಟಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT