ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ವಯಸ್ಸು ಮರೆತು ಸ್ಪರ್ಧಿಗಳಾದ ಹಿರಿಯರು

ಜಿಲ್ಲಾಡಳಿತದಿಂದ ಹಿರಿಯ ನಾಗರಿಕರಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
Published : 4 ಸೆಪ್ಟೆಂಬರ್ 2024, 14:17 IST
Last Updated : 4 ಸೆಪ್ಟೆಂಬರ್ 2024, 14:17 IST
ಫಾಲೋ ಮಾಡಿ
Comments

ಉಡುಪಿ: ಒಂದೆಡೆ ಹಿರಿಯ ಮಹಿಳೆಯರ ಗಾಯನ ಸ್ಪರ್ಧೆ ನಡೆದರೆ, ಇನ್ನೊಂದೆಡೆ ಬಿರುಸಿನ ನಡಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸರದಿಯಲ್ಲಿ ನಿಂತು ಹೆಸರು ನೋಂದಾಯಿಸುತ್ತಿರುವ 70 ವರ್ಷ ವಯಸ್ಸು ದಾಟಿದ ಪುರುಷರು. ಮತ್ತೊಂದೆಡೆ ಬಕೆಟ್‌ಗೆ ಬಾಲ್‌ ಎಸೆಯುವ ಸ್ಪರ್ಧೆಗೆ ತಯಾರಿ. ಇವೆಲ್ಲವುಗಳಲ್ಲೂ ಲವಲವಿಕೆಯಿಂದ ಭಾಗಿಗಳಾಗುತ್ತಿರುವ ಹಿರಿಯ ಚೇತನಗಳು...

ಇದು ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಬೆಳಿಗ್ಗೆ ಕಂಡು ಬಂದ ದೃಶ್ಯಗಳು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಯುವಕರನ್ನೂ ನಾಚಿಸುವಂತೆ ಉತ್ಸಾಹದಿಂದ ಹಿರಿಯರು ಪಾಲ್ಗೊಂಡರು.

ಸೂರ್ಯ ನೆತ್ತಿ ಮೇಲೆ ಬಂದಿದ್ದರೂ ಬಿಸಿಲಿಗೆ ಅಂಜದೆ 68 ವರ್ಷ ಮೇಲ್ಪಟ್ಟವರು ಖುಷಿಯಿಂದಲೇ ಬಿರುಸಿನ ನಡಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಬಿರುಸಾಗಿ ನಡೆದರೆ ಮಂಡಿ ನೋವು ಜಾಸ್ತಿಯಾಗಬಹುದು ಎಂದು ಕೆಲವರು ಹಿಂದೆ ಸರಿದರೆ. ಇನ್ನು ಕೆಲವರು ನಾನು ದಿನಾಲೂ ಬೆಳಿಗ್ಗೆ ನಡಿಗೆಗೆ ಹೋಗುತ್ತೇನೆ ಇದು ಯಾವ ಲೆಕ್ಕ ಎಂದು ನಡಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಸಾಂಸ್ಕೃತಿಕ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಾಯನ ಸ್ಪರ್ಧೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿದ್ದರು. ಜಿಲ್ಲಾಡಳಿತದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲಾ ತಮ್ಮ ವಯಸ್ಸು, ದುಗುಡಗಳನ್ನು ಮರೆತು ಸ್ಪರ್ಧೆಗಳಲ್ಲಿ ತಲ್ಲೀನರಾಗಿದ್ದರು. ತಮ್ಮ ಓರಗೆಯವರ ಜೊತೆ ಕಷ್ಟ ಸುಖ ಹಂಚಿಕೊಂಡರು. ನೆರೆದಿದ್ದವರೆಲ್ಲಾ ಉತ್ಸಾಹದ ಚಿಲುಮೆಗಳಾಗಿ ಕಂಡು ಬಂದರು.

ಅಂದಾಜು 60ರಿಂದ 70 ವರ್ಷ ವಯಸ್ಸು ದಾಟಿದ ಜಿಲ್ಲೆಯ 100ಕ್ಕೂ ಹೆಚ್ಚು ಮಂದಿ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಹಿರಿಯರಿಗಾಗಿ ಸಂಗೀತ ಕುರ್ಚಿ, ಬಕೆಟ್‌ಗೆ ಬಾಲ್‌ ಎಸೆಯುವ ಸ್ಪರ್ಧೆ, ಬಿರುಸಿನ ನಡಿಗೆ, ಗಾಯನ, ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಮಹಿಳೆಯೊಬ್ಬರು ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡರು
ಹಿರಿಯ ಮಹಿಳೆಯೊಬ್ಬರು ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡರು
ನಾನು ಸರ್ಕಾರಿ ಹುದ್ದೆಯಲ್ಲಿದ್ದು ನಿವೃತ್ತನಾದವ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಂಬಾ ಖುಷಿಯಾಗುತ್ತಿದೆ. ಇದೊಂದು ಅದ್ಬುತವಾದ ಅನುಭವ. ನಮ್ಮ ಪ್ರಯಾಸ ಸಂಕಷ್ಟಗಳನ್ನು ಮರೆತು ಪಾಲ್ಗೊಳ್ಳುತ್ತಿದ್ದೇವೆ
ಣೇಶ ಮರಾಠೆ ಹಿರಿಯ ನಾಗರಿಕರು
ನಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆ. ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ
ನಿರಂಜನ ಭಟ್‌ ಹಿರಿಯ ನಾಗರಿಕರು

ಯುವಜನರಿಗೆ ಮಾದರಿ: ಜಿಲ್ಲಾಧಿಕಾರಿ

ಹಿರಿಯ ನಾಗರಿಕರು ಸ್ಪರ್ಧೆಗಳಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಳ್ಳುವ ಮೂಲಕ ಯುವಜನರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು. ಹಿರಿಯ ನಾಗರಿಕರಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿರಿಯರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವರ ಮನಸ್ಸಿಗೆ ದೇಹಕ್ಕೆ ಲವಲವಿಕೆ ಸಿಗುತ್ತದೆ ಎಂದರು. ಹಿರಿಯರನ್ನು ಗೌರವಿಸಿ: ಪ್ರತಿಯೊಬ್ಬರೂ ಹಿರಿಯರನ್ನು ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ ಹೇಳಿದರು. ಇಂತಹ ಆಟಗಳು ಲವಲವಿಕೆಯನ್ನು ಉತ್ತೇಜಿಸುತ್ತದೆ ಮತ್ತು ವಯಸ್ಸನ್ನು ಮರೆಯುವಂತೆ ಮಾಡುತ್ತದೆ ಎಂದರು. ಅನುರಾಧಾ ಹಾದಿಮನಿ ಸರಳಾ ಕಾಂಚನ್‌ರತ್ನಾ ಉಪಸ್ಥಿತರಿದ್ದರು. ವಿಶ್ವನಾಥ ಹೆಗಡೆ ಸ್ವಾಗತಿಸಿದರು. ಗಣನಾಥ ಎಕ್ಕಾರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT