ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ವಿದ್ಯಾರ್ಥಿಗಳ ‘ಮನೆ ಮನ’ ಪ್ರವೇಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಭಿನ್ನ ಯತ್ನ: ಕಾರ್ಕಳದಲ್ಲಿ ಮಿಷನ್‌ 100 ಗುರಿ
Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಉಡುಪಿ: ಕಾರ್ಕಳ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸೂರ್ಯನಿಗಿಂತ ಮುಂಚೆ ಎದ್ದು ಓದುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳಂತೂ ವಿದ್ಯಾರ್ಥಿಗಳಿಗಿಂತ ಮುಂಚಿತವಾಗಿ ಎದ್ದು, ಮಕ್ಕಳು ಓದುತ್ತಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಇದುಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ‘ಮಿಷನ್‌ 100‌’ ಯೋಜನೆಯ ಎಫೆಕ್ಟ್‌.

ಕಾರ್ಕಳ ತಾಲ್ಲೂಕು ವ್ಯಾಪ್ತಿಯ ಎಲ್ಲ ಎಸ್ಸೆ‌ಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಗುರಿಯೊಂದಿಗೆ ‘ವಿದ್ಯಾರ್ಥಿಗಳ ಮನೆ ಮನ ಭೇಟಿ’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಪ್ರಯತ್ನಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜನಪ್ರತಿನಿಧಿಗಳು ಹಾಗೂ ಸಮಾಜದ ಗಣ್ಯರು ಕೈಜೋಡಿಸಿರುವುದು ವಿಶೇಷ.

ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್‌,ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಡಿಡಿಪಿಐ ಶೇಷಶಯನ ಕಾರಿಂಜ ಸೇರಿದಂತೆ ಹಲವರು ‘ಮನೆ ಮನ’ ಕಾರ್ಯಕ್ರಮದ ಭಾಗವಾಗಿದ್ದಾರೆ.

ಏನಿದು ‘ಮನೆ ಮನ’ ಕಾರ್ಯಕ್ರಮ

ಸಮಾಜದ ವಿವಿಧ ಕ್ಷೇತ್ರಗಳ 100 ಗಣ್ಯರು ಹಾಗೂ 400 ಪ್ರಾಥಮಿಕ ಶಿಕ್ಷಕರ ತಂಡವನ್ನು ‘ಮನೆ ಮನ ಭೇಟಿ’ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗಿದೆ. ಈ ತಂಡ ನಿರ್ಧಿಷ್ಟ ದಿನ ಬೆಳಗಿನ ಜಾವ 4.30ಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ದಿಢೀರ್ ಭೇಟಿ ನೀಡುತ್ತದೆ. ವಿದ್ಯಾರ್ಥಿಗಳು ಮಲಗಿದ್ದರೆ ಎಬ್ಬಿಸಿ ಓದಲು ಹಚ್ಚುತ್ತದೆ. ವಿದ್ಯಾರ್ಥಿ ಓದುತ್ತಿದ್ದರೆ, ಬೆನ್ನುತಟ್ಟಿ ಪ್ರೋತ್ಸಾಹಿಸುತ್ತದೆ.

ಜತೆಗೆ, ಮಕ್ಕಳ ಓದಿಗೆ ಪೂರಕ ವಾತಾವರಣ ನಿರ್ಮಿಸಿಕೊಡುವಂತೆ, ಮಕ್ಕಳು ಮನೆಯಲ್ಲಿದ್ದಾಗ ಟಿವಿ ಹಾಕದಂತೆ, ಇತರೆ ಕೆಲಸಗಳಿಗೆ ಕಳುಹಿಸದಂತೆ ಪೋಷಕರಿಗೆ ಸಲಹೆಗಳನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಕಾರ್ಕಳ ಬಿಇಒ ಜಿ.ಎಸ್‌.ಶಶಿಧರ.

1000ಕ್ಕೂ ಹೆಚ್ಚು ಮನೆ ಭೇಟಿ

ಜೂನ್‌ನಿಂದ ಮನೆ–ಮನ ಕಾರ್ಯಕ್ರಮ ನಡೆಯುತ್ತಿದ್ದು, ನೋಡೆಲ್‌ ಅಧಿಕಾರಿಯಾಗಿ ಬಿಆರ್‌ಪಿ ವೆಂಕಟರಮಣ ಕಲ್ಕೂರ್‌ ಅವರನ್ನು ನಿಯೋಜಿಸಲಾಗಿದೆ. ಈಗಾಗಲೇ 1,000ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಲಾಗಿದೆ. ಕಾರ್ಕಳದಲ್ಲಿ 2,657 ವಿದ್ಯಾರ್ಥಿಗಳಿದ್ದು, ಕೆಲವೇ ದಿನಗಳಲ್ಲಿ ಗುರಿ ತಲುಪಲಿದ್ದೇವೆ ಎಂದು ಬಿಇಒ ತಿಳಿಸಿದರು.

ಮಕ್ಕಳ ಮನೆಗೆ ಭೇಟಿ ನೀಡಿದಾಗ ಕುಟುಂಬದ ಆರ್ಥಿಕ ಪರಿಸ್ಥಿತಿ ಅರಿಯಲು ಸಾಧ್ಯವಾಗಿದ್ದು, ದಾನಿಗಳ ನೆರವಿನಿಂದ ಸೋಲಾರ್ ಲೈಟ್ಸ್‌, ಟೇಬಲ್ ಲ್ಯಾಂಪ್ಸ್‌ ಹಾಗೂ ಕಲಿಕೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಕೊಡಿಸಲಾಗಿದೆ ಎಂದರು.

10 ಕಡೆ ರಾತ್ರಿ ತರಗತಿ

ತಾಲ್ಲೂಕಿನ ಹತ್ತು ಶಾಲೆಗಳಲ್ಲಿ ರಾತ್ರಿ ತರಗತಿಗಳನ್ನು ಆರಂಭಿಸಲಾಗಿದ್ದು, ಶಾಲೆಬಿಟ್ಟ ಬಳಿಕ ಸಂಜೆ 5ರಿಂದ ರಾತ್ರಿ 8ರವರೆಗೆ ಕಲಿಸಲಾಗುತ್ತಿದೆ. ಬೆಳಿಗ್ಗೆ ಬೇಗ ಎದ್ದು ಓದುವಂತೆ ಕರೆ ಮಾಡಲಾಗುತ್ತಿದೆ. ಶಿಕ್ಷಕರಿಗೂ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಕ್ಕಳ ಸ್ಮರಣಶಕ್ತಿ ವೃದ್ಧಿಗೆ ವಜ್ರದೇಹಿ ಮನೋಧ್ಯಾನ, ಹಾಕಿನಿ ಮುದ್ರೆಯ ಧ್ಯಾನ ಕಲಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿರಾಜ್ಯಕ್ಕೆ ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲ್ಲೂಕು ನಂಬರ್ ಒನ್‌ ಸ್ಥಾನಕ್ಕೇರಬೇಕು ಎಂಬುದು ನಮ್ಮ ಗುರಿ ಎನ್ನುತ್ತಾರೆ ಬಿಇಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT