ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗರ್ಸೆ ಕಂಬಳ: 60 ಜೊತೆ ಕೋಣಗಳು ಭಾಗಿ

‘ಕಂಬಳಕ್ಕೆ ₹1 ಕೋಟಿ ನೆರವಿಗೆ ಸರ್ಕಾರ ಚಿಂತನೆ’
Published 11 ಡಿಸೆಂಬರ್ 2023, 16:09 IST
Last Updated 11 ಡಿಸೆಂಬರ್ 2023, 16:09 IST
ಅಕ್ಷರ ಗಾತ್ರ

ಬೈಂದೂರು: ಕಂಬಳ ಕೇವಲ ಕೋಣಗಳ ಓಟವಲ್ಲ, ರೈತರ ಹಬ್ಬವಾಗಿ ಕರಾವಳಿಯಲ್ಲಿ ಆಚರಿಸಲ್ಪಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಭಾನುವಾರ ಬೈಂದೂರು ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ ಭಾಗವಹಿಸಿ ಕಂಬಳ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೆಂಗಳೂರು ಕಂಬಳ ಯಶಸ್ವಿಯಾಗಿ ನಡೆದಿದ್ದು ಕರಾವಳಿಯ ಕಲೆಯನ್ನು ರಾಜಧಾನಿಯ ಜನರು ನೋಡಿ ಸಂಭ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಂಬಳಕ್ಕೆ ಸರ್ಕಾರ ₹1 ಕೋಟಿ ಹಣ ಮೀಸಲಿರಿಸಲು ಚಿಂತನೆ ನಡೆಸಿದೆ ಎಂದರು.

ಶತಮಾನಗಳ ಇತಿಹಾಸ ಹೊಂದಿರುವ ಬೈಂದೂರು ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಂಭ್ರಮದಿಂದ ನಡೆಯಿತು. 60ಕ್ಕೂ ಅಧಿಕ ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ತಗ್ಗರ್ಸೆ ಕಂಬಳದ ಮೆರುಗು ಹೆಚ್ಚಿಸಿದವು. ಈ ಬಾರಿ ‘ಸೆನ್ಸಾರ್’ ಮೂಲಕ ಫಲಿತಾಂಶ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಕಂಠದಮನೆ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬು ಹೆಗ್ಡೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್‌ಚಂದ್ರ ಶೆಟ್ಟಿ, ತೆಗ್ಗರ್ಸೆ ಹೆಗ್ಡೆ ಕುಟುಂಬದವರು ಮತ್ತು ತಗ್ಗರ್ಸೆ ಗ್ರಾಮಸ್ಥರು ಕಂಬಳ ಅಭಿಮಾನಿಗಳು ಇದ್ದರು.

ಕಂಬಳದ ವಿಶೇಷತೆ

ಬೈಂದೂರು ವ್ಯಾಪ್ತಿಯಲ್ಲಿ ಅತೀ ದೊಡ್ಡ ಕಂಬಳ ಎಂಬ ಹಿರಿಮೆಗೆ ತಗ್ಗರ್ಸೆ ಕಂಬಳ ಪಾತ್ರವಾಗಿದೆ. ಕಂಬಳ ನಡೆಯುವುದಕ್ಕೂ ಮುನ್ನ ಬೆಳಿಗ್ಗೆ ಗದ್ದೆಯ ಅಲಂಕಾರ ದೈವ ದೇವರ ಪೂಜೆ ಕಾರ್ಯಾದಿಗಳು ನಡೆದವು. ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ವಿಶಾಲವಾದ ಕಂಬಳ ಗದ್ದೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಪದ್ಧತಿಯಂತೆ ಊರಿನ ನಿರ್ದಿಷ್ಟ ಕುಟುಂಬದವರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ನೀಡಲಾಯಿತು. ಮೆರವಣಿಗೆಯಲ್ಲಿ ಸಾಗಿಬಂದ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಓಡಿಸಿದರೆ ಉಳಿದ ಕೋಣಗಳು ಹಗ್ಗ ಹಾಗೂ ಹಲಗೆ ವಿಭಾಗದ ಸ್ವರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ಇಲ್ಲಿನ ಕಾರಿಕಟ್ಟೆ ಮನೆತನದವರ ಕೋಣಗಳು ಪ್ರತಿವರ್ಷ ತಗ್ಗರ್ಸೆ ಕಂಬಳ ಗದ್ದೆಗೆ ವಿಶೇಷ ವೇಷಭೂಷಣ ವಾದ್ಯ ಚೆಂಡೆ ಡೋಲು ವಾದನಗಳ ಜೊತೆ ಹೆಜ್ಜೆ ಹಾಕಿ ಬರುವುದು ರೂಢಿ. ಕಳೆದ 37 ವರ್ಷಗಳಿಂದ ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ನೇತೃತ್ವದಲ್ಲಿ  ಪೂಜಾ ವಿಧಿವಿಧಾನಗಳನ್ನು ನಡೆಸಿ ಕಂಬಳಗದ್ದೆಗೆ ಕೋಣಗಳನ್ನು ಕರೆತರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT