ಬೈಂದೂರು: ಬೈಂದೂರು ವಲಯ ನಾಡ ದೋಣಿ ಮತ್ತು ಗಂಗೊಳ್ಳಿ ನಾಡ ದೋಣಿ ಮೀನುಗಾರರು ಒಂದುಗೂಡಿ ಸುಮಾರು ನೂರಕ್ಕೂ ಹೆಚ್ಚು ದೋಣಿಯ ಮೂಲಕ ತೆರಳಿ ಸಮುದ್ರದಲ್ಲಿ ಬುಲ್‌ಟ್ರಾಲ್ ಮಾಡುತ್ತಿದ್ದ ಬೋಟ್‌ಗಳನ್ನು ತಡೆದು ಪ್ರತಿಭಟಿಸಿದ್ದಾರೆ.
ತೀರಪ್ರದೇಶಕ್ಕೆ ಸಮೀಪ ಸಮುದ್ರದಲ್ಲಿ ಬುಲ್‌ಟ್ರಾಲ್ ಮಾಡುವುದರಿಂದ ಹಾಗೂ ಲೈಟ್ ಫಿಶಿಂಗ್‌ನಿಂದ ಮೀನುಗಳ ಸಂತತಿ ನಾಶವಾಗುತ್ತಿದ್ದು, ಇದು ಕಾನೂನು ಬಾಹಿರವಾಗಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾಡ ದೋಣಿ ಮೀನುಗಾರರು ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳಿದರೆ ಬರಿಗೈಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೈಂದೂರು ವಲಯ ನಾಡದೋಣಿ ಮೀನುಗಾರರ ಅಧ್ಯಕ್ಷ ನಾಗೇಶ್ ಖಾರ್ವಿ ಹೇಳಿದ್ದಾರೆ.
ಮಂಗಳೂರಿನಿಂದ ಕಾರವಾರದ ತನಕ ನಾಡ ದೋಣಿ ಮೀನುಗಾರರು ಸಭೆ ನಡೆಸಿ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಟ್ರಾಲ್ ಬೋಟ್‌ನವರು ತೀರ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ನಾಡ ದೋಣಿಯ ಮೀನುಗಾರರಿಗೆ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ.
ಲೈಟ್ ಫಿಶಿಂಗ್, ಬುಲ್‌ಟ್ರಾಲ್‌ಗೆ ಭಾರತದಲ್ಲಿ ನಿಷೇಧವಿದೆ. ಸುಪ್ರಿಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಈ ರೀತಿಯ ಮೀನುಗಾರಿಕೆ ಮಾಡುವಂತಿಲ್ಲ. ಅದರ ಹೊರತಾಗಿಯೂ ಅಲ್ಲಲ್ಲಿ ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡುವವರ ಪರವಾನಗಿ ರದ್ದು ಮಾಡಿ, ದಂಡ ವಿಧಿಸಬೇಕು ಎಂದು ಮೀನುಗಾರರ ಮುಖಂಡರು ಆಗ್ರಹಿಸಿದ್ದಾರೆ.
ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಖಾರ್ವಿ, ವೆಂಕಟರಮಣ ಖಾರ್ವಿ, ಕೋಡೇರಿ ವಲಯ ಅಧ್ಯಕ್ಷ ಡಿ. ಚಂದ್ರ ಖಾರ್ವಿ, ಮಾಜಿ ಅಧ್ಯಕ್ಷ ಮದನ್ ಕುಮಾರ್, ರಾಜ್ಯ ಒಕ್ಕೂಟದ ಕಾರ್ಯದರ್ಶಿ ಯಶ್ವಂತ್ ಖಾರ್ವಿ, ಮಹಾ ಈಶ್ವರ್ ಸೇವಾ ಸಮಿತಿಯ ಅಧ್ಯಕ್ಷ ರಾಮ ಖಾರ್ವಿ, ರಾಣೆಬಲೆ ಒಕ್ಕೂಟದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ ಮತ್ತು ಎಲ್ಲಾ ವಲಯದ ದೋಣಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.