ಉಡುಪಿ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ನಗರದ ಹಳೆ ತಾಲ್ಲೂಕು ಕಚೇರಿ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಿದೆ.
ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಈ ಐತಿಹಾಸಿಕ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಹಲವು ದಿನಗಳಿಂದ ಕಟ್ಟಡ ತೆರವು ಕಾಮಗಾರಿ ನಡೆದಿದೆ.
ಕಟ್ಟಡದ ಹಂಚು, ಮರದ ಹಲಗೆ, ಕಬ್ಬಿಣದ ಸಲಾಕೆಗಳನ್ನು ತೆರವುಗೊಳಿಸಿದ ಬಳಿಕ ಗೋಡೆಗಳನ್ನೂ ಇದೀಗ ಕೆಡವಲಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಸಬ್‌ಜೈಲ್ ಆಗಿದ್ದ ಈ ಕಟ್ಟಡವು ಐತಿಹಾಸಿಕ ಮಹತ್ವವನ್ನು ಪಡೆದಿತ್ತು. ಕಟ್ಟಡಕ್ಕೆ ಪಾರಂಪರಿಕ ಮಾನ್ಯತೆ ನೀಡಿ ಉಳಿಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬಂದಿತ್ತು. ಆದರೆ ಅದು ವಿಫಲವಾಗಿತ್ತು.
1906ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರನ್ನು ಈ ಕಟ್ಟಡದ ಹಿಂಬದಿಯ ಜೈಲಿನಲ್ಲಿರಿಸಲಾಗಿತ್ತು. ನಗರದಲ್ಲಿ ಹೊಸ ಜೈಲು ನಿರ್ಮಾಣವಾಗುವವರೆಗೂ ಈ ಜೈಲಿನಲ್ಲಿ ಕೈದಿಗಳನ್ನು ಇಡಲಾಗಿತ್ತು.
ಮದ್ರಾಸ್ ರೂಫಿಂಗ್ ವಿನ್ಯಾಸದಲ್ಲಿ ಕಟ್ಟಲಾಗಿದ್ದ ಈ ಕಟ್ಟಡವು ಬ್ರಿಟಿಷ್ ವಾಸ್ತು ಶಿಲ್ಪ ವೈಭವಕ್ಕೆ ಸಾಕ್ಷಿಯಾಗಿತ್ತು.
ಹಳೆ ತಾಲ್ಲೂಕು ಕಚೇರಿ ಕಟ್ಟಡ ಸಂಪೂರ್ಣವಾಗಿ ನೆಲಸಮವಾದರೂ ಅದರ ಹಿಂಭಾಗದಲ್ಲಿರುವ ಸೆಲ್‌ಗಳಿರುವ ಜೈಲು ಕಟ್ಟಡ ಇನ್ನೂ ಇತಿಹಾಸದ ಕುರುಹಾಗಿ ನೆಲೆ ನಿಂತಿದೆ.
ಆದರೆ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡದ ಸುತ್ತಲೂ ಮರಗಳು ಬೆಳೆದಿವೆ. ಮರಗಳ ಬೇರುಗಳು ಕೈದಿಗಳನ್ನಿರಿಸುತ್ತಿದ್ದ ಸೆಲ್‌ಗಳ ಗೋಡೆಗಳನ್ನು ಆವರಿಸಿದೆ. ಈ ಕಟ್ಟಡದ ಮೊದಲ ಅಂತಸ್ತಿನಲ್ಲಿ 12 ಮತ್ತು ಕೆಳ ಅಂತಸ್ತಿನಲ್ಲಿ 12 ಸೆಲ್‌ಗಳಿವೆ.
ಎರಡು ಅಂತಸ್ತಿನ ಈ ಜೈಲು ಕಟ್ಟಡದ ಮೊದಲ ಅಂತಸ್ತಿಗೆ ಹತ್ತಿ ಹೋಗುವ ಮೆಟ್ಟಿಲುಗಳ ಬಳಿಯೂ ಪೊದೆಗಳು ಬೆೆಳೆದಿವೆ. ತಾಲ್ಲೂಕು ಕಚೇರಿ ಕಟ್ಟಡದ ಅವಶೇಷಗಳು ಈ ಕಟ್ಟಡದ ಸುತ್ತಲೂ ಆವರಿಸಿಕೊಂಡಿದೆ. ಐತಿಹಾಸಿಕ ಮಹತ್ವವಿರುವ ಈ ಕಟ್ಟಡವು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಬ್ರಿಟಿಷ್ ಶೈಲಿಯ ಈ ಜೈಲು ಕಟ್ಟಡವು ಗತಿಸಿ ಹೋದ ಕಾಲದ ನೂರಾರು ಘಟನೆಗಳಿಗೆ ಸಾಕ್ಷಿಯಾಗಿ ಇಂದಿಗೂ ತಲೆಯೆತ್ತಿ ನಿಂತಿದೆ. ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಮತಿಯನ್ನು ಹೊಂದಿರುವ ಈ ಕಟ್ಟಡವನ್ನಾದರೂ ಸಂರಕ್ಷಿಸಬೇಕು ಮತ್ತು ಅದನ್ನು ಶಿಥಿಲಗೊಳ್ಳದಂತೆ ಕಾಪಾಡಬೇಕೆಂಬುದು ನಾಗರಿಕರ ಆಗ್ರಹವಾಗಿದೆ.
ನೆಲಸಮಗೊಳಿಸಿರುವ ಕಟ್ಟಡದ ಹಿಂಭಾದಲ್ಲಿರುವ ಜೈಲು ಕಟ್ಟಡವನ್ನು ಸದ್ಯಕ್ಕೆ ಹಾಗೆಯೇ ಉಳಿಸಲಾಗುವುದು. ಅದನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಬೇಕೊ ಎಂಬುದನ್ನು ಮುಂದೆ ಚರ್ಚಿಸಿ ತೀರ್ಮಾನಿಸಲಾಗುವುದುಪ್ರಭಾಕರ ಪೂಜಾರಿ ನಗರಸಭೆ ಅಧ್ಯಕ್ಷ
ಹಳೆ ತಾಲ್ಲೂಕು ಕಚೇರಿ ಜಾಗದಲ್ಲಿ ₹45 ಕೋಟಿ ವೆಚ್ಚದಲ್ಲಿ ನಗರಸಭೆಯ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ಈ ಕುರಿತು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದೆ. ಮಂಜೂರಾತಿ ಲಭಿಸಿದ ಕೂಡಲೇ ಕೆಲಸ ಆರಂಭವಾಗಲಿದೆರಾಯಪ್ಪ ನಗರಸಭೆಯ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.