ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ಪ್ರತಿಭಟನಾನಿರತ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ನಲ್ಲಿ ಪಾಠ: ರಘುಪತಿ ಭಟ್

Last Updated 26 ಜನವರಿ 2022, 12:51 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಂದಿನಂತೆಯೇ ವಿದ್ಯಾರ್ಥಿನಿಯರು ಹಿಜಾಬ್ ಹಾಕದೆ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು. ಈ ನಿಯಮವನ್ನು ಒಪ್ಪದಿದ್ದರೆ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ನಲ್ಲಿ ಪಾಠ ಪ್ರವಚನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ರಘುಪತಿ ಭಟ್ ಹೇಳಿದರು.

ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ತರಗತಿಗೆ ಹಾಜರಾಗಬೇಕು. ಇಲ್ಲವಾದರೆ, ತರಗತಿಗೆ ಪ್ರವೇಶ ಇಲ್ಲ. ಆನ್‌ಲೈನ್‌ನಲ್ಲಿ ಪಾಠ ಕೇಳಬಹುದು. ಪರೀಕ್ಷೆಗೂ ಹಾಜರಾಗಬಹುದು ಎಂದರು.

ಯಾರದ್ದೋ ಕುಮ್ಮಕ್ಕಿನಿಂದ ಮಕ್ಕಳ ಹಾಗೂ ಕಾಲೇಜಿನ ಭವಿಷ್ಯವನ್ನು ಹಾಳುಮಾಡಬಾರದು. ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಹಿಂದಿನಂತೆಯೇ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ಮನವೊಲಿಸಬೇಕು ಎಂದು ಪೋಷಕರಿಗೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಗೆ ಶಾಸಕರು ಮನವಿ ಮಾಡಿದರು.

ಸರ್ಕಾರಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇಲ್ಲದಿದ್ದರೂ ಮಕ್ಕಳಲ್ಲಿ ಶಿಸ್ತು ಹಾಗೂ ಸಮಾನತೆ ತರುವ ಉದ್ದೇಶದಿಂದ ಜಿಲ್ಲೆಯ ಹಲವು ಸರ್ಕಾರಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಹಿಜಾಬ್ ವಿವಾದ ಹಿಂದೆ ಇರಲಿಲ್ಲ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಹಾಗೂ ವಿದ್ಯಾರ್ಥಿನಿಯರು ಹಿಜಾಬ್ ವಿವಾದವನ್ನು ಸೃಷ್ಟಿಸಿದ್ದಾರೆ ಎಂದರು.

ಒಂದು ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ಕೊಟ್ಟರೆ, ಎಲ್ಲ ಕಾಲೇಜುಗಳಲ್ಲಿ ಅನುಮತಿ ನೀಡಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರ ಪೇಟ, ಶಾಲು ತೊಟ್ಟು ಕಾಲೇಜಿಗೆ ಬರಲು ಕೇಳುತ್ತಾರೆ. ಕ್ರಿಯೆಗೆ ಪ್ರತಿಕ್ರಿಯೆ ಎನ್ನುವಂತಾಗುತ್ತದೆ. ವಿ.ಎಸ್‌.ಆಚಾರ್ಯ ಅವರ ಕಾಲದಿಂದಲೂ ಜಿಲ್ಲೆಯಲ್ಲಿ ಉತ್ತಮ ಕೋಮು ಸೌಹಾರ್ದ ವಾತಾವರಣ ಇದೆ. ಉಡುಪಿ ಗಡಿಯೊಳಗೆ ಕೋಮುವಾದವನ್ನು ಬಿಟ್ಟುಕೊಂಡಿಲ್ಲ. ಹಿಜಾಬ್ ವಿವಾದವನ್ನು ದೊಡ್ಡದಾಗಿ ಮಾಡಬಾರದು ಎಂದು ಮುಸ್ಲಿಂ ಮುಖಂಡರಿಗೆ ತಿಳಿಸಲಾಗಿದೆ ಎಂದು ಶಾಸಕರು ಹೇಳಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಹಾಗೂ ಪೋಷಕರ ಜತೆ ಮುಸ್ಲಿಂ ಮುಖಂಡರು ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಹಿಜಾಬ್ ವಿವಾದ ಸುಖಾಂತ್ಯವಾಗಲಿದೆ. ಕಾಲೇಜುಗಳಲ್ಲಿ ಸಮವಸ್ತ್ರ ಹಾಗೂ ವಸ್ತ್ರಸಂಹಿತೆ ಜಾರಿ ಸಂಬಂಧ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ವರದಿ ಸಲ್ಲಿಕೆಯಾಗಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ತಾಳ್ಮೆಯಿಂದ ಕಾಯಬೇಕು ಎಂದು ಶಾಸಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT