ಭಾನುವಾರ, ಜೂನ್ 20, 2021
29 °C
ಲಾಕ್‌ಡೌನ್ ಅವಧಿಯಲ್ಲಿ ಕನ್ನಡ, ಕುಂದಾಪುರ ಭಾಷೆ ಕಲಿತ ಸ್ಪೇನ್ ಯುವತಿ ಥೆರೆಸಾ

ಲಾಕ್‌ಡೌನ್ ಎಫೆಕ್ಟ್ | ಕರಾವಳಿ ಸಂಸ್ಕೃತಿ ಮೈಗೂಡಿಸಿಕೊಂಡ ಸ್ಪೇನ್ ಬೆಡಗಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮುಡಿ ತುಂಬಾ ಮಲ್ಲಿಗೆ ಮುಡಿದು, ಮುಗುಳ್ನಗೆ ಚೆಲ್ಲುತ್ತಾ ‘ಹ್ವಾಯ್‌ ಬನ್ನಿ’ ಎನ್ನುತ್ತಲೇ ಕುಂದಾಪುರ ಭಾಷೆಯಲ್ಲಿ ಬರಮಾಡಿಕೊಂಡರು ಸ್ಪೇನ್‌ ದೇಶದ ಥೆರೆಸಾ ಸೊರಿಯಾನೊ. ವಿದೇಶಿ ಯುವತಿಯ ಉಡುಗೆ, ತೊಡುಗೆ, ಹಾವ, ಭಾವದಲ್ಲಿ ಕರಾವಳಿ ಛಾಯೆ ಎದ್ದು ಕಾಣುತ್ತಿತ್ತು. ಸ್ಪೇನ್‌ನ ಬೆಡಗಿ ಕರಾವಳಿಯ ಹುಡುಗಿಯಾಗಿ ರೂಪಾಂತರವಾಗಲು ಕಾರಣವಾಗಿದ್ದು ಕೊರೊನಾ ಲಾಕ್‌ಡೌನ್ ಎಂಬುದು ವಿಶೇಷ.

ಥೆರೆಸಾ ಮಾರ್ಚ್‌ನಲ್ಲಿ ಭಾರತಕ್ಕೆ ಪ್ರವಾಸ ಬಂದವರು. ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಸುತ್ತಾಡಿ, ಕರಾವಳಿಗೆ ಬರುವ ಹೊತ್ತಿಗೆ ಲಾಕ್‌ಡೌನ್ ಘೋಷಣೆಯಾಯ್ತು. ಅಂತರ ರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಸ್ವದೇಶಕ್ಕೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದರು. ಈ ಸಂದರ್ಭ ಥೆರೆಸಾ ನೆರವಿಗೆ ಬಂದಿದ್ದು ಬೈಂದೂರು ತಾಲ್ಲೂಕಿನ ಹೇರಂಜಾಲು ಗ್ರಾಮದ ಕೃಷ್ಣ ಪೂಜಾರಿ.

ಕೃಷ್ಣ ಪೂಜಾರಿ ಹಾಗೂ ಥೆರೆಸಾ ಸಹೋದರ ಕಾರ್ಲೊಸ್‌ ಮುಂಬೈನಲ್ಲಿ ಸಹೋದ್ಯೋಗಿಗಳು. ಲಾಕ್‌ಡೌನ್‌ಗೂ ಮುನ್ನ ಕೃಷ್ಣಪೂಜಾರಿ ಸ್ವಂತ ಊರು ಬೈಂದೂರಿನ ಹೇರಂಜಾಲಿಗೆ ಬಂದಿದ್ದರು. ಇದೇ ಸಂದರ್ಭ ಥೆರೆಸಾ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ತಿಳಿದ ಕಾರ್ಲೊಸ್‌ ಆಕೆಗೆ ಕೆಲವು ದಿನ ಆಶ್ರಯ ನೀಡುವಂತೆ ಕೃಷ್ಣಪೂಜಾರಿ ಅವರನ್ನು ಕೇಳಿಕೊಂಡರು. ಸ್ಪಂದಿಸಿದ ಗೆಳೆಯ ಥೆರೆಸಾಗೆ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು.

ಥೆರೆಸಾ ಮಾತೃಭಾಷೆ ಸ್ಪಾನಿಷ್. ಸಂವಹನಕ್ಕೆ ಸಾಲುವಷ್ಟು ಇಂಗ್ಲೀಷ್ ಕಲಿತಿದ್ದಾರೆ. ಆರಂಭದಲ್ಲಿ ಆಕೆಯ ಜತೆ ಮಾತನಾಡುವುದು, ಬೇಕು ಬೇಡಗಳನ್ನು ತಿಳಿಯಲು ಮನೆಯವರಿಗೆ ಕಷ್ಟವಾಯಿತು. ಬರಬರುತ್ತಾ ಎಲ್ಲರ ಜತೆ ಹೊಂದಿಕೊಳ್ಳುತ್ತಾ ಕುಟುಂಬದ ಸದಸ್ಯೆಯಂತಾದಳು ಎಂದರು ಕೃಷ್ಣ ಪೂಜಾರಿ.

ಕರಾವಳಿಯ ಸಂಸ್ಕೃತಿ, ಆಚಾರ, ವಿಚಾರ, ಆಚರಣೆ ಹಾಗೂ ಭಾಷೆಯ ಕಲಿಕೆಯತ್ತ ಆಸಕ್ತಿ ತೋರಿದ ಥೆರೆಸಾ ಕೆಲವೇ ದಿನಗಳಲ್ಲಿ ಕನ್ನಡದ ವರ್ಣಮಾಲೆ ಬರೆಯಲು ಹಾಗೂ ಉಚ್ಛಾರ ಮಾಡುವುದನ್ನು ಕಲಿತರು. ಕುಂದಾಪುರ ಭಾಷೆಯ ಕೆಲವು ಪದಗಳನ್ನೂ ಚೆಂದ ಮಾತನಾಡುತ್ತಾರೆ ಎನ್ನುತ್ತಿದ್ದಂತೆ, ‘ಕುಂದಾಪುರ ಭಾಷಿ ಚೆಂದ್‌ ಗ್ವಾಂಪಿ’ (ಕುಂದಾಪುರ ಭಾಷೆ ಚೆಂದ) ಎಂದು ಹರಳು ಉರಿದಂತೆ ಮಾತನಾಡುತ್ತಾ ಹೋದರು ಥೆರೆಸಾ.

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕಾಲ ಕಳೆಯದ ಥೆರೆಸಾ ಹಾಡಿಗೆ ಹೋಗಿ ದೆರಲೆ (ಮರದಿಂದ ಬಿದ್ದ ಎಲೆಗಳ ರಾಶಿ) ಹಾಯುವುದು, ನೆಲಗಡಲೆ ಕೀಳುವುದು, ನಾಟಿಗೆ ಭತ್ತದ ಪೈರು ಹೊರುವುದು, ಬಾವಿಯಿಂದ ನೀರು ಸೇದುವುದು, ಹಸುಗಳಿಗೆ ಹುಲ್ಲು ಹಾಕುವುದು, ಹಾಲು ಕರೆಯುವುದು, ಕೋಳಿಗೆ ಮೇವು ಹಾಕುವುದು, ಅಡುಗೆ ಕೆಲಸಕ್ಕೆ ನೆರವಾಗುವುದರ ಜತೆಗೆ, ಕುಂದಾಪುರ ಹಾಗೂ ಕನ್ನಡ ಭಾಷೆ ಕಲಿಯಲು ಸಮಯವನ್ನು ಬಳಸಿಕೊಂಡಿದ್ದಾರೆ.

ಕರಾವಳಿಯಲ್ಲಿ ತುಂಬಾ ಇಷ್ಟವಾಗಿದ್ದು ಏನು ಅಂಥ ಕೇಳಿದರೆ, ಕುಂದಾಪುರ ಭಾಷೆ ಹಾಗೂ ಮೀನಿನ ಪಲ್ಯ ಎಂದು ಮುಖ ಅರಳಿಸಿದ ಥೆರೆಸಾ ಒಂದಷ್ಟು ಖಾದ್ಯಗಳ ಹೆಸರನ್ನು ಹೇಳುತ್ತಾ ಹೋದರು.

‘ಯಕ್ಷಗಾನ ಕಲಿಯುವಾಸೆ’
ಥೆರೆಸಾ ಸೊರಿಯಾನೊ ಎಂಜಿನಿಯರಿಂಗ್ ಮುಗಿಸಿದ್ದು ಸ್ಪೇನ್‌ನಲ್ಲಿ ಗಾರ್ಡನ್‌ ಡಿಸೈನಿಂಗ್ ವೃತ್ತಿಯಲ್ಲಿದ್ದಾರೆ. ಕರಾವಳಿ ಸಂಸ್ಕೃತಿಯ ಮೋಹಕ್ಕೆ ಸಿಲುಕಿರುವ ಅವರು ಯಕ್ಷಗಾನ ಕಲಿಯುವ ಆಸಕ್ತಿ ಹೊಂದಿದ್ದಾರೆ. ಲಾಕ್‌ಡೌನ್‌ನಿಂದಾಗಿ ಈ ಬಾರಿ ಕಲಿಕೆ ಸಾಧ್ಯವಾಗದಿದ್ದರೂ, ಮತ್ತೊಮ್ಮೆ ಬಂದಾಗ ಖಂಡಿತ ಕಲಿಯುತ್ತೇನೆ. ಜತೆಗೆ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದರು. ಲಾಕ್‌ಡೌನ್‌ ಬಹಳಷ್ಟು ಹೊಸ ವಿಚಾರಗಳನ್ನು ಕಲಿಸಿದೆ. ಭಾರತದಲ್ಲಿ ಸಂಬಂಧಗಳಿಗಿರುವ ಮೌಲ್ಯಗಳ ಅರಿವಾಗಿದೆ. ಇಲ್ಲಿನ ಜನರ ಪ್ರೀತಿ, ಸ್ನೇಹ, ಸಹಕಾರ ಮರೆಯುವುದಿಲ್ಲ. ಸಾಧ್ಯವಾದರೆ, ಮುಂದೆ ಇಲ್ಲಿಯೇ ನೆಲೆಸುತ್ತೇನೆ ಎಂದರು ಥೆರೆಸಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು