ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಗುಡುಗು ಸಿಡಿಲಿನ ಮಳೆಯ ಆರ್ಭಟ, ಚಂಡಮಾರುತ ಭೀತಿ, ಎಚ್ಚರಿಕೆ

ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ
Last Updated 16 ಅಕ್ಟೋಬರ್ 2018, 12:58 IST
ಅಕ್ಷರ ಗಾತ್ರ

ಉಡುಪಿ: ಬೆಳಿಗ್ಗೆ ನಗರದಲ್ಲಿ ನೆತ್ತಿಸುಡುವಷ್ಟು ಬಿಸಿಲಿತ್ತು. ಬಿಸಿಲಿಲ ದಗೆಗೆ ಜನರು ಹೈರಾಣಾಗಿದ್ದರು. ಮಧ್ಯಾಹ್ನ 2ರ ಸುಮಾರಿಗೆ ಸಂಪೂರ್ಣವಾಗಿ ವಾತಾವರಣವೇ ಬದಲಾಯ್ತು. ಇದ್ದಕ್ಕಿದ್ದಂತೆ ದಟ್ಟಮೋಡ ಆವರಿಸಿ ಗುಡುಗು ಸಿಡಿಲಿನ ಜೋರು ಮಳೆ ಸುರಿಯಿತು.

ಕೆಲವು ದಿನಗಳಿಂದ ಬಿಡುವುಕೊಟ್ಟಿದ್ದ ವರುಣ ಮಂಗಳವಾರ ಆರ್ಭಟಿಸಿದ. ಮಧ್ಯಾಹ್ನ ಆರಂಭವಾದ ಮಳೆ ಸಂಜೆವರೆಗೂ ಎಡೆಬಿಡದೆ ಸುರಿಯಿತು. ಮಳೆಯ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ರಸ್ತೆಗಳೆಲ್ಲ ಕೆರೆಗಳಂತಾದವು. ಗುಡುಗು ಸಿಡಿಲಿನ ಆರ್ಭಟ ಹಾಗೂ ಗಾಳಿಯ ಅಬ್ಬರವೂ ಹೆಚ್ಚಾಗಿತ್ತು.

ಅನಿರೀಕ್ಷಿತವಾಗಿ ಸುರಿದ ಮಳೆ ಕೃಷಿಕರಿಗೆ ಕೊಂಚ ನೆಮ್ಮದಿ ತಂದಿದೆ. ಬೆಳೆದುನಿಂತಿದ್ದ ಪೈರು ನೀರಿಲ್ಲದೆ ಒಣಗುತ್ತಿತ್ತು. ಅಡಿಕೆ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳು ಸೊರಗಿದ್ದವು. ಈಗ ಸುರಿದ ಮಳೆಯಿಂದಾಗಿ ಬೆಳೆಗಾರರು ಸ್ವಲ್ಪ ನಿರಾಳರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಬಿಸಿಲಿನ ದಗೆ ಹೆಚ್ಚಾಗಿತ್ತು. ದಿಢೀರ್ ಮಳೆಗೆ ವಾತಾವರಣ ತಂಪಾಗಿದೆ. ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಬಿದ್ದಿದ್ದರೂ ನದಿಗಳು ಮಾತ್ರ ಬತ್ತುವ ಹಂತ ತಲುಪಿದ್ದವು. ಒಳಹರಿವು ನಿಂತುಹೋಗಿತ್ತು.

ಜತೆಗೆ ಮಳೆಗಾಲದಲ್ಲೇ ಬಾವಿಗಳಲ್ಲಿನ ಅಂತರ್ಜಲ ಪ್ರಮಾಣ ಕುಸಿದಿತ್ತು. ಇದರಿಂದ ಅವಧಿಗೂ ಮುನ್ನವೇ ನೀರಿನ ಸಮಸ್ಯೆ ತಲೆದೋರುವ ಆತಂಕ ಎದುರಾಗಿತ್ತು. ಈಗ ಸುರಿದ ಮಳೆಯಿಂದಾಗಿ ಜೀವಸೆಲೆ ಬಂದಂತಾಗಿದೆ. ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಶಮನಗೊಂಡಂತಾಗಿದೆ.

ಮೊತ್ತೊಂದೆಡೆ ಅರೇಬಿಯನ್ ಸಮುದ್ರದಲ್ಲಿ ಲುಬನ್ ಚಂಡಮಾರತು ಕಾಣಿಸಿಕೊಂಡಿದ್ದು, ಕರಾವಳಿಯ ಮೇಲೆ ಪ್ರಭಾವ ಬೀರಲಿದೆ. ಒಂದೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಮುದ್ರದಲ್ಲಿ ಭಾರಿ ಅಲೆಗಳು ಏಳಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ. ಜತೆಗೆ, ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕಡಲಿಗೆ ವಾಪಸ್ ಬರುವಂತೆ ಸೂಚನೆ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸೂಚನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT