ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಮುಕ್ತ ಅಪಾರ್ಟ್‍ಮೆಂಟ್‌ ಆಶಯ

ಉಡುಪಿಯಲ್ಲಿ ಪೈಲಟ್ ಯೋಜನೆ ಅನುಷ್ಠಾನ
Last Updated 12 ಸೆಪ್ಟೆಂಬರ್ 2022, 13:38 IST
ಅಕ್ಷರ ಗಾತ್ರ

ಉಡುಪಿ: ತಂಬಾಕು ಸೇವಿಸಿ ಮೃತಪಡುತ್ತಿರುವವರ ಸಂಖ್ಯೆಗಿಂತಲೂ ಬಳಕೆದಾರರ ಕುಟಂಬ ಸದಸ್ಯರು ಹಾಗೂ ಸಮೀಪ ವರ್ತಿಗಳು ಹೆಚ್ಚು ಮೃತಪಡುತ್ತಿರುವುದು ಸಂಶೋಧನೆಗಳಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ತಂಬಾಕು ಮುಕ್ತ ವಸತಿ ಸಮುಚ್ಛಯ ಎಂಬ ವಿನೂತನ ಕಾರ್ಯಕ್ರಮವನ್ನು ಉಡುಪಿಯಲ್ಲಿ ಫೈಲಟ್‌ ಯೋಜನೆಯಾಗಿ ಅನುಷ್ಠಾನಗೊಳಿಸುತ್ತಿದೆ.

ತುಂಬಾಕು ಬಳಕೆ ಮಾಡುವವರು ಪ್ರಾಥಮಿಕ ಹಾಗೂ ಪ್ರತ್ಯಕ್ಯ ಬಳಕೆದಾರರಾದರೆ ಅವರ ಸಮೀಪದಲ್ಲಿರುವವರು ಪರೋಕ್ಷ ಅಥವಾ ಎರಡನೇ ಬಳಕೆದಾರರಾಗುತ್ತಾರೆ. ನೇರವಾಗಿ ತಂಬಾಕು ಬಳಕೆ ಮಾಡುವವರಿಗಿಂತಲೂ ಹೆಚ್ಚಿನ ಖಾಯಿಲೆಗಳು ಪರೋಕ್ಷ ಬಳಕೆದಾರರಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುತ್ತದೆ ಅಧ್ಯಯನ ವರದಿ.

ತಂಬಾಕು ಉತ್ಪನ್ನಗಳ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ವಸತಿ ಸಮುಚ್ಚಯಗಳಲ್ಲಿ ಅಲ್ಲಿನ ನಿವಾಸಿಗಳೇ ಸ್ವಯಂಪ್ರೇರಣೆಯಿಂದ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿರ್ಬಂದಿಸಿ, ತಂಬಾಕು ಮುಕ್ತ ವಸತಿ ಸಮುಚ್ಛಯಗಳನ್ನಾಗಿಸುವ ಪ್ರಾಯೋಗಿಕ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಸರ್ಕಾರ ಅನುಷ್ಠಾನಕ್ಕೆ ತಂದಿದೆ.

ಈ ಯೋಜನೆಯ ಅನುಷ್ಠಾನದಿಂದ ವಸತಿ ಸಮುಚ್ಛಯಗಳಲ್ಲಿ ವಾಸ ಮಾಡುವ ನಾಗರಿಕರಿಗೆ ಧೂಮಪಾನದ ಹೊಗೆ ಇಲ್ಲದ ಶುದ್ದಗಾಳಿಯ ಸೇವನೆಗೆ ಅವಕಾಶ ಸಿಗಲಿದೆ. ಜತೆಗೆ ತಂಬಾಕು ಉತ್ಪನ್ನಗಳ ಎರಡನೇ ಬಳಕೆದಾರರ ಪ್ರಮಾಣ ಗಣನೀಯವಾಗಿ ತಗ್ಗಲಿದ್ದು, ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗಲಿದೆ. ತಂಬಾಕು ಮುಕ್ತ ವಸತಿ ಸಮುಚ್ಚಯಗಳ ಆಶಯ ಸಾಕಾರವಾಗಲಿದೆ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ.

ಯೋಜನೆಯ ಪ್ರಕಾರ ತಂಬಾಕು ಮುಕ್ತ ವಸತಿ ಸಮುಚ್ಛಯಗಳನ್ನು ಗುರುತಿಸಲಾಗುತ್ತಿದ್ದು ನಿವಾಸಿಗಳ ಸರ್ವೇ ಕಾರ್ಯ ನಡೆಯುತ್ತಿದೆ. ನಿವಾಸಿಗಳಲ್ಲಿ ಯಾರು ದೂಮಪಾನ ಹಾಗೂ ತಂಬಾಕು ಉತ್ಪನ್ನ ಬಳಸುತ್ತಾರೆ, ಯಾರು ಬಳಸುವುದಿಲ್ಲ ಎಂಬ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ತಂಬಾಕು ಉತ್ಪನ್ನ ಬಳಸುವವರಿಗೆ ಮನೆಗಳಲ್ಲಿ ಧೂಮಪಾನ ಮಾಡದಂತೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.

ಉಡುಪಿ ಹಾಗೂ ಮಣಿಪಾಲದಲ್ಲಿ ವಸತಿ ಸಮುಚ್ಛಯಗಳ ಸಂಖ್ಯೆ ಹೆಚ್ಚಾಗಿದ್ದು ವಲಸೆ ಕುಟುಂಬಗಳು, ವಿದ್ಯಾರ್ಥಿಗಳು, ನೌಕರರು ಹೆಚ್ಚಾಗಿ ವಾಸವಿದ್ದಾರೆ. ಇಲ್ಲಿನ ಅಪಾರ್ಟ್‌ಮೆಂಟ್‌ಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು ತಂಬಾಕು ಮುಕ್ತ ಸಮುಚ್ಛಯಗಳನ್ನಾಗಿ ಬದಲಾದರೆ ಆರೋಗ್ಯಯುತ ವಾತಾವರಣ ನಿರ್ಮಾಣ ವಾಗಲಿದೆ. ಯೋಜನೆ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಬಹುದುಎನ್ನುತ್ತಾರೆಅವರು.

ಉಡುಪಿ ಜಿಲ್ಲಾ ಸವೇಕ್ಷಣಾ ಘಟಕದಿಂದ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತಂಬಾಕು ಮುಕ್ತ ವಸತಿ ಸಮುಚ್ಛಯಗಳು ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಧೂಮಪಾನ ಮುಕ್ತ ಸಮುಚ್ಛಯಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುವಂತಹ ಕಾಲ ಬರಲಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕೋಡಿಬೆಂಗ್ರೆ ಗ್ರಾಮ ತಂಬಾಕು ಮುಕ್ತ ಗ್ರಾಮವಾಗಿ ಘೋಷಣೆಯಾಗಿದೆ. ಕಾರ್ಕಳದ ರೆಂಜಾಳ ಹಾಗೂ ಕುಂದಾಪುರದ ಕೊರ್ಗಿ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮವಾಗಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT