ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಂತ್ರಿಕ ಕೃಷಿಯ ಅಬ್ಬರ: ಸಾಂಪ್ರದಾಯಿಕ ಕೃಷಿಗೆ ಬರೆ!

Last Updated 27 ಜೂನ್ 2018, 16:33 IST
ಅಕ್ಷರ ಗಾತ್ರ

ಆಧುನಿಕ ಭರಾಟೆಗೆ ಸಿಕ್ಕು ನಲುಗಿರುವ ಹಳ್ಳಿಗಳು ಆಧುನಿಕತೆಗೆ ತೆರೆದುಕೊಳ್ಳದ ಸ್ಥಿತಿಯಲ್ಲಿ ಇವೆ. ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತಿವೆ. ಪರಿಣಾಮ ಕೃಷಿ ಭೂಮಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಕೃಷಿಕರ ಮಕ್ಕಳು ಉದ್ಯೋಗ ಅರಸಿ ಪಟ್ಟಣಕ್ಕೆ ಗುಳೆ ಹೋಗುತ್ತಿದ್ದಾರೆ. ಕೃಷಿ ಮಾಡುವ, ಉತ್ತುವ ಜನರಿಲ್ಲದೆ ಭೂಮಿ ಪಾಳು ಬಿಳುತ್ತಿವೆ. ಇನ್ನೂ ಕೆಲವು ರೈತರು ಕೃಷಿ ಯಾವುದೇ ಕಾರಣಕ್ಕೂ ಬಿಡುವುದು ಬೇಡ ಎಂಬ ಗಟ್ಟಿ ಧೈರ್ಯ ಮಾಡಿ ಇರುವ ಭೂಮಿಯಲ್ಲಿಯೇ ಕೃಷಿ ಚಟುವಟಿಕೆ ನಡೆಸುತ್ತಿರುವುದು ಸ್ವಲ್ಪ ಮಟ್ಟಿನ ನೆಮ್ಮದಿ ತಂಡಿದೆ.

ನಗರ ವಾಸಿಗಳ ಮಕ್ಕಳು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಕೃಷಿಕರ ಮಕ್ಕಳು ಕೂಡ ಕೃಷಿಯನ್ನು ಬೆರಗು ಕಣ್ಣುಗಳಿಂದ ನೋಡುವ ಸ್ಥಿತಿ ಇದೆ. ಗೋವುಗಳಿಂದ ಹಾಲು ಕರೆಯುವ, ನೇಜಿ ಮಾಡುವ, ಭತ್ತ ಕಟಾವು ಪ್ರಾತ್ಯಕ್ಷಿಕೆ ಮಾಹಿತಿ ನೀಡುವ ಮೂಲಕ ಯಾಂತ್ರಿಕ ಜೀವನಕ್ಕೆ ಅಣಿಯಾಗಿದ್ದೇವೆ. ಬೆಳಿಗ್ಗೆ ಕುಡಿವ ಚಹಾ, ಕಾಫಿಗೆ ಬಳಸುವ ಹಾಲು ಎಲ್ಲಿಂದ ಬರುತ್ತದೆ ಎಂದು ಮಕ್ಕಳನ್ನು ಪ್ರಶ್ನಿಸಿದರೆ ಪೇಟೆಯಲ್ಲಿ ಸಿಗುವ ಹಾಲಿನ ಪಾಕೇಟ್‌ ತೋರಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಇದೂ ಯಾಂತ್ರಿಕ ಬದುಕಿನ ಒಂದು ಭಾಗದ ದುಷ್ಪರಿಣಾಮವೇ ಸರಿ.

ಹಳ್ಳಿ ಜೀವನಕ್ಕೆ ಒಗ್ಗಿಕೊಂಡು ತಂದೆ-ತಾಯಿ ಕೃಷಿ ಜೀವನದ ಕುರಿತು ಹೇಳುತ್ತಾರಾದರೂ ಅದನ್ನು ಕೇಳುವ ತಾಳ್ಮೆ ನಮಲ್ಲಿ ಉಳಿದಿಲ್ಲ. ಟಿವಿ, ಕಂಪ್ಯೂಟರ್, ಮೊಬೈಲ್‌ ತಾಸುಗಟ್ಟಲೇ ಎಲ್ಲ ಕೆಲಸಗಳನ್ನು ನಯವಾಗಿ ಬದಗಿಟ್ಟು ಬಿಡುವ ಚಾಳಿ ನಮ್ಮದು. ಇದೀಗ ಮಳೆಗಾಲ ಪ್ರಾರಂಭವಾಗಿದೆ. ಕೃಷಿ ಚಟುವಟಿಕೆಗಾಗಿ ಭೂಮಿ ಹಸನು ಮಾಡುವ, ಬೀಜ ಬಿತ್ತನೆ ಮಾಡುವುದು, ಸುಡು ಮಣ್ಣು-ಗೊಬ್ಬರ ಹಾಕುವುದು ಇತ್ಯಾದಿ ಕೆಲಸಗಳಲ್ಲಿ ಹಿರಿಯರು ಬ್ಯುಸಿ ಆಗಿದ್ದಾರೆ. ಆದರೆ, ಯುವ ಸಮೂಹ ಮಾತ್ರ ಇದ್ಯಾವುದು ಸಬಂಧವೇ ಇಲ್ಲ ಎಂಬಂತೆ ಕೈಕಟ್ಟಿ ಕುಳಿತಿದೆ.

ಹಿಂದೆ ರೈತಾಪಿ ವರ್ಗ ಕೃಷಿಗಾಗಿ ಅನೇಕ ತಯಾರಿ ನಡೆಸಬೇಕಿತ್ತು. ಭೂಮಿ ಹದಗೊಳಿಸಲು ಅಗತ್ಯವಿರುವ ಕೋಣ ಅಥವಾ ಎತ್ತುಗಳ ನಿರ್ವಹಣೆ, ನೇಗಿಲು-ನೊಗ ತಯಾರಿ ಇತ್ಯಾದಿ ಅವಲಂಬಿಸಬೇಕಿತ್ತು. ಕೃಷಿಗಾಗಿ ತಿಂಗಳು ಮುಂಚಿತ ನಡೆಸುತ್ತಿದ್ದ ತಯಾರಿ ಆಧುನಿಕತೆ ಒತ್ತಡದ ಜೀವನದಲ್ಲಿ ಬದಲಾಗಿದೆ. ಸಹಜ ಕೃಷಿ ಸಲಕರಣೆಗಳು ನೇಪಥ್ಯಕ್ಕೆ ಸರಿದಿವೆ.ಟಿಲ್ಲರ್, ಟ್ರ್ಯಾಕ್ಟರ್‌ ಕೃಷಿ ಭೂಮಿಗೆ ಲಗ್ಗೆ ಇಟ್ಟಿವೆ. ಅತ್ಯಂತ ಸುಲಭವಾಗಿ ಕೃಷಿ ಕಾರ್ಯ ನಡೆಸಬಹುದಾಗಿದ್ದರೂ ಕೃಷಿ ಆಳುಗಳು, ಕೃಷಿ ಭೂಮಿ ಕೊರತೆ ಬಹಳಷ್ಟಿದೆ.

ಹುರುಳಿ ಆಹಾರ: ಸಹಜ ಕೃಷಿಗೆ ಭೂಮಿ ಹದಗೊಳಿಸಲು ಕೋಣ ಅಥವಾ ಎತ್ತು ಬಳಸುತ್ತಿದ್ದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದರು. ಇವುಗಳಿಗೆ ಮುಖ್ಯವಾಗಿ ಹುರುಳಿ ಆಹಾರ. ಮಳೆ ರಭಸಕ್ಕೆ ರೈತನೊಂದಿಗೆ ಕೃಷಿ ಭೂಮಿಯಲ್ಲಿ ದುಡಿಯುವ ರಾಸುಗಳು ಮೈ ಬೆಚ್ಚಗಾಗಿಸಲು ಹುರುಳಿ ರಾಮ ಭಾಣ. ಅಲ್ಲದೆ ಹುರುಳಿ ಸಾರನ್ನು ಮನೆಯವರೆಲ್ಲ ಊಟಕ್ಕೂ ಬಳಸುತ್ತಿದ್ದರು. ಕಾಲ ಕ್ರಮೇಣ ಯಂತ್ರಗಳು ಕೃಷಿ ಭೂಮಿಗೆ ಲಗ್ಗೆಯಿಟ್ಟಾಗ ಅನಿವಾರ್ಯವಾಗಿ ಕೋಣ, ಎತ್ತು ಕೂಡ ಕೃಷಿ ಭೂಮಿಯಿಂದ ಮರೆಯಾದವು. ಯಂತ್ರೋಪಕರಣಗಳು ಕೃಷಿ ಭೂಮಿಗೆ ಬಂದಾಗ ಕೃಷಿ ಕುಟುಂಬದ ಸಾಂಪ್ರಾದಾಯಿಕತೆ ಮರೆಯಾಗುತ್ತಾ ಸಾಗಿತು. ಗದ್ದೆ ಕಾರ್ಯಕ್ಕಾಗಿಯೇ ಸಾಕುತ್ತಿದ್ದ ಕೋಣಗಳಿಂದ ಹವ್ಯಾಸಕ್ಕಾಗಿ ರೂಢಿಸಿಕೊಂಡ ಕಂಬಳಗಳಿಗೆ ಮಾತ್ರ ಸೀಮಿತ ಎಂದರೂ ತಪ್ಪಿಲ್ಲ.

ಕೃಷಿ ಚಟುವಟಿಕೆಗೆ ಯಂತ್ರ ಅವಲಂಬಿಸಿದ ಕೃಷಿಕ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದು ಸತ್ಯ. ರೈತ ಹೇಳಿದ ಸಮಯದಲ್ಲಿ ಟ್ರ್ಯಾಕ್ಟರ್, ಟಿಲ್ಲರ್‌ ಸಿಗದ ಸ್ಥಿತಿಯಿದೆ. ಸಹಜ ಕೃಷಿ ಸಲಕರಣೆಗಳಿಂದ ರೈತರು ತಮಗೆ ಅಗತ್ಯವಿರುವ ಭೂಮಿ ಅಗತ್ಯಕ್ಕೆ ತಕ್ಕಂತೆ ಉಳುವುದಕ್ಕೆ ಸಾಧ್ಯವಾಗುತ್ತದೆ. ನೇಗಿಲು ಬಳಸಿ ಹದಗೊಳಿಸಿದ ಭೂಮಿಯಲ್ಲಿ ಸಾಕಷ್ಟು ಸಮಯದವರೆಗೆ ನೀರು ಶೇಖರಣೆಯಾಗುವುದರಿಂದ ಉತ್ತಮ ಬೆಳೆ ತೆಗೆಯಬಹುದಾಗಿದೆ. ಸಹಜ ಕೃಷಿ ಸಲಕರಣೆಗಳ ನಿರ್ವಹಣೆಗೆ ಬಹಳಷ್ಟು ಸಮಯ ತಗಲುವುದರಿಂದ ಅನಿವಾರ್ಯವಾಗಿ ಯಾಂತ್ರಿಕತೆಗೆ ರೈತಾಪಿ ವರ್ಗ ಒಗ್ಗಿಕೊಂಡಿರುವುದಂತೂ ಸತ್ಯ. ಕೃಷಿ ಭೂಮಿ ಕಡಿಮೆಯಾಗುತ್ತಿದ್ದರೂ ಇರುವ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ ಎನ್ನುವುದೇ ಸಂತೋಷ.

ಜನಪದ ಹಾಡಿನಿಂದ ದೂರ ಸರಿದ ಜನರು

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಹಳೆ ಕೃಷಿ ಸಲಕರಣೆಗಳು ದೂರವಾಗಿವೆ. ಈಗ ಆ ಜಾಗವನ್ನು ಯಾಂತ್ರಿಕ ಸಲಕರಣೆಗಳು ಆಕ್ರಮಿಸಿಕೊಂಡಿವೆ. ಬೆಳೆ ಕಟಾವಿನಲ್ಲಿಯೂ ಕೂಡ ಯಂತ್ರಗಳದ್ದೆ ಕಾರು ಬಾರು. ಎತ್ತು, ಕೋಣಗಳೊಂದಿಗೆ ಗದ್ದೆ ಉಳುಮೆ ಮಾಡುತ್ತಿದ್ದ ರೈತರು ಬೇಸರ ಕಳೆಯಲು ಹಾಡುತ್ತಿದ್ದ ಕೃಷಿ ಜನಪದ ಹಾಡುಗಳು ಧ್ವನಿ, ಯಂತ್ರದ ಸದ್ದಿನಲ್ಲಿ ಅಡಗಿ ಹೋಗಿವೆ. ಭೂಮಿ ಉಳುಮೆ, ಬಿತ್ತನೆ, ಕಟಾವು, ಭತ್ತ ತುಳಿಯುವಾಗ ಗುನುಗುತ್ತಿದ್ದ ಹಾಡುಗಳಿಗ ಕನಸು ಮಾತ್ರ.

ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿ

ಎತ್ತು, ಕೋಣ ಬಳಸಿ ಉಳುಮೆ ಮಾಡಿದ ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ ತೆಗೆಯಲು ಸಾಧ್ಯ. ಯಾಂತ್ರಿಕ ಸಾಧನ ಬಳಸಿದರೆ ಕೆಲಸ ಸುಲಭ ಆಗುತ್ತದೆಯೇ ವಿನಹ ಗದ್ದೆಯಲ್ಲಿ ನೀರಿನ ತೇವಾಂಶ ಸಾಕಷ್ಟು ಹಿಡಿದಿಟ್ಟುಕೊಳ್ಳುವ ಸಾಧ್ಯತೆ ಕಡಿಮೆ. ಸಹಜ ಕೃಷಿ ಸಲಕರಣೆಗಳ ನಿರ್ವಹಣೆ ದುಬಾರಿ ಆದರೂ, ಸಕಾಲದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಅನಿವಾರ್ಯವಾಗಿ ಯಾಂತ್ರಿಕತೆಗೆ ಒಗ್ಗಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ಕೃಷಿಕ ಆನಂದ ಶೆಟ್ಟಿ ನೀರ‍್ಗಡಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT