ಭಾನುವಾರ, ಏಪ್ರಿಲ್ 18, 2021
25 °C
ಕಿವಿ ಕೇಳದ, ಮಾತು ಬಾರದ ಬಾಲಕಿ ಮೇಲೆ ಅತ್ಯಾಚಾರ

ಅಪರಾಧಿಗೆ 15 ವರ್ಷ ಜೈಲು; ಸಂತ್ರಸ್ತೆಗೆ ₹ 9 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಿವಿ ಕೇಳದ, ಮಾತು ಬಾರದ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಅಪರಾಧಿ ಹರೀಶ್‌ಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಯಾದವ್ ವನಮಾಲಾ ಆನಂದರಾವ್ 15 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದ್ದಾರೆ.

ಶಿಕ್ಷೆಯ ಜತೆಗೆ ₹ 15 ಸಾವಿರ ದಂಡವನ್ನು ವಿಧಿಸಿರುವ ನ್ಯಾಯಾಲಯ ನೊಂದ ಬಾಲಕಿಗೆ ಸರ್ಕಾರದ ಸಂತ್ರಸ್ತ ಪರಿಹಾರ ನಿಧಿಯಿಂದ ₹ 9 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ.

2018ರ ಡಿಸೆಂಬರ್‌ನಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕಿಯನ್ನು ಅಪರಾಧಿ ಹರೀಶ್ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಾಲಕಿಗೆ ಕಿವಿ ಕೇಳದ, ಮಾತನಾಡಲು ಬಾರದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.

2019ರಲ್ಲಿ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ರಕ್ತಸ್ರಾವ ಉಂಟಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದೇವೇಳೆ ಅತ್ಯಾಚಾರ ನಡೆದ ವಿಚಾರವೂ ಬಹಿರಂಗವಾಗಿತ್ತು. ಬಾಲಕಿ ಕೈಸನ್ನೆ ಹಾಗೂ ಬರವಣಿಗೆ ಮೂಲಕ ಆರೋಪಿಯನ್ನು ಗುರುತಿಸಿದ್ದಳು.

ತಾಯಿ ನೀಡಿದ ದೂರಿನ ಮೇಲೆ ಹರೀಶ್‌ನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಕಾರ್ಕಳ ಪ್ರಭಾರ ಸಿಪಿಐ ಮಹೇಶ್ ಪ್ರಸಾದ್ ತನಿಖೆ ನಡೆಸಿದ್ದರು. ಬಳಿಕ ಸಿಪಿಐ ಸಂಪತ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 22 ಸಾಕ್ಷಿಗಳ ಪೈಕಿ 13 ಮಂದಿ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದರು. ಅಪರಾಧಿಯ ಕೃತ್ಯಕ್ಕೆ ಪೂರಕವಾಗಿ ಡಿಎನ್‌ಎ ವರದಿ ಕೂಡ ಅಭಿಯೋಜನೆಯ ಪರವಾಗಿತ್ತು.

ಮಾನವೀಯ ನೆಲೆಯಲ್ಲಿ ಆದೇಶ:

ಸಂತ್ರಸ್ತ ಬಾಲಕಿಯ ಜೀವನ ನಿರ್ವಹಣೆಗೆ ಹಾಗೂ ಮಗುವಿನ ಲಾಲನೆ, ಪೋಷಣೆ ಭವಿಷ್ಯದ ಹಿತದೃಷ್ಟಿಯಿಂದ ಗರಿಷ್ಠ ಪರಿಹಾರ ನೀಡುವಂತೆ ವಿಶೇಷ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು. ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಸಂತ್ರಸ್ತ ಬಾಲಕಿಗೆ ₹ 9 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು