ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಯಾಕ್ ದೋಣಿಗಳ ಮೂಲಕ ಮತದಾನ ಜಾಗೃತಿ ಸಂದೇಶ

ಸಾಲಿಗ್ರಾಮ ಸೀತಾ ನದಿಯ ದಟ್ಟ ಕಾಂಡ್ಲಾವನ
Published 29 ಏಪ್ರಿಲ್ 2023, 5:38 IST
Last Updated 29 ಏಪ್ರಿಲ್ 2023, 5:38 IST
ಅಕ್ಷರ ಗಾತ್ರ

ಸಾಲಿಗ್ರಾಮ (ಬ್ರಹ್ಮಾವರ): ವಿಧಾನಸಭಾ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದೇ ಮೊದಲ ಬಾರಿಗೆ ವಿಶಿಷ್ಟ ರೀತಿಯಲ್ಲಿ ಕಯಾಕಿಂಗ್‌ ಮಾಡುವ ಕಯಾಕ್ ದೋಣಿಗಳ ಮೂಲಕ ಮತದಾನ ಮಹತ್ವ ಕುರಿತು ಜಾಗೃತಿ ಸಂದೇಶ ಮೂಡಿಸಲಾಗಿದೆ.

ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬುಧವಾರ ಸಾಲಿಗ್ರಾಮದ ಸೀತಾ ನದಿಯ ನಡುವಿನ ದಟ್ಟ ಕಾಂಡ್ಲಾವನದ ನಡುವೆ ಕಯಾಕಿಂಗ್ ಮಾಡಲು ಬಳಸುವ ದೋಣಿಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಲಾಯಿತು.

ಕಯಾಕಿಂಗ್ ಪಾಯಿಂಟ್ ಬಳಿಗೆ ತೆರಳಿದ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ಪ್ರೋಬೇಷನರಿ ಐಎಎಸ್‌ ಅಧಿಕಾರಿ ಯತೀಶ್ ಅವರು ಕಯಾಕಿಂಗ್ ಪ್ರಾರಂಭದ ಸ್ಥಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಅಡಿಕೆ ಮುಟ್ಟಾಳೆ ಧರಿಸಿ, ಸ್ಥಳದಲ್ಲಿ ಅಳವಡಿಸಲಾಗಿದ್ದ ನೈತಿಕ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತಾ ಉಪಕರಣಗಳನ್ನು ಧರಿಸಿ ಕಯಾಕಿಂಗ್ ಆರಂಭಿಸಿದರು.

30 ನಿಮಿಷಗಳ ಕಯಾಕಿಂಗ್ ನಂತರ ಮಾಂಗ್ರೋವ್ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಕಯಾಕ್ ದೋಣಿಗಳ ಮೂಲಕ ಮತದಾನ ದಿನವಾದ ಮೇ 10ರ ದಿನಾಂಕವನ್ನು ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ಕಯಾಕಿಂಗ್‌ನ ಆರಂಭದ ಸ್ಥಳದಿಂದ ಕಾರ್ಯಕ್ರಮ ನಡೆಯವ ಸ್ಥಳದವರೆಗೂ ನದಿಯಲ್ಲಿ ಮತದಾನ ಜಾಗೃತಿ ಸಾರುವ ಯಕ್ಷಗಾನ ಮುಕುಟ ಮಾದರಿಯ ಆಕೃತಿಗಳು ಗಮನ ಸೆಳೆದವು.

ಇದೇ ಸಂದರ್ಭದಲ್ಲಿ ಕಯಾಕಿಂಗ್ ಮೂಲಕ ಆ ಪ್ರದೇಶಕ್ಕೆ ಆಗಮಿಸಿದ್ದ ಮಣೂರು ಪಡುಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿ ಮತದಾನ ದಿನಾಂಕವನ್ನು ಒಳಗೊಂಡ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ಸಾಲಿಗ್ರಾಮದ ಕಯಾಕಿಂಗ್‌ ಮಾಂಗ್ರೋವ್ ಕಾಡುಗಳ ಮಧ್ಯೆ ಕಯಾಕ್‌ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಸಂದೇಶ ಮೂಡಿಸಲಾಯಿತು
ಸಾಲಿಗ್ರಾಮದ ಕಯಾಕಿಂಗ್‌ ಮಾಂಗ್ರೋವ್ ಕಾಡುಗಳ ಮಧ್ಯೆ ಕಯಾಕ್‌ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಸಂದೇಶ ಮೂಡಿಸಲಾಯಿತು
ಪ್ರವಾಸಿ ತಾಣ ಸಾಹಸ ಚಟುವಟಿಕೆಗಳು ನಡೆಯುವ ಸ್ಥಳಗಳು ಯುವ ಜನತೆಯನ್ನು ಹೆಚ್ಚು ಆಕರ್ಷಿಸಲಿದ್ದು ಇಲ್ಲಿ ನಡೆಸುವ ಮತದಾನ ಜಾಗೃತಿ ಕಾರ್ಯಕ್ರಮ ಯುವ ಜನತೆಯನ್ನು ಮತದಾನ ಕೇಂದ್ರಗಳಿಗೆ ಸೆಳೆಯಲು ಸಹಕಾರಿಯಾಗಲಿದೆ
ಎಂ. ಕೂರ್ಮಾರಾವ್ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT