ಉಡುಪಿ: ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಒತ್ತಾಯಿಸಿದರು.
ಸುದ್ದಿಗಾರರ ಜೊತೆ ಶನಿವಾರ ಇಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತನಿಖೆ ಎದುರಿಸಬೇಕು. ಅದು ಪೂರ್ಣಗೊಳ್ಳುವವರೆಗೆ ಅವರು ಯಾವುದೇ ಅಧಿಕಾರದಲ್ಲಿ ಮುಂದುವರಿಯಬಾರದು ಎಂದರು.
ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸೋಮವಾರದಿಂದ ರಾಜ್ಯದಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದೂ ಹೇಳಿದರು.
ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ಬಿಜೆಪಿ ದೂರು ಕೊಟ್ಟಿಲ್ಲ. ಮೂವರು ಖಾಸಗಿ ವ್ಯಕ್ತಿಗಳು ದೂರು ಕೊಟ್ಟಿದ್ದರು. ಈ ಕುರಿತು ರಾಜ್ಯಪಾಲರು ವಿವರಣೆ ಕೇಳಿದರೂ ಅದಕ್ಕೆ ಉತ್ತರ ನೀಡದೆ ಸಿದ್ರಾಮಯ್ಯ ಮತ್ತು ಸರ್ಕಾರ ಬಂಡತನ ತೋರಿತ್ತು ಎಂದರು.