ಶುಕ್ರವಾರ, ಜುಲೈ 30, 2021
28 °C

ಉಡುಪಿ: ಕೋವಿಡ್‌ ವಿರುದ್ಧ ಗೆದ್ದ ಒಂದೇ ಕುಟುಂಬದ 7 ಮಂದಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ಕೊರೊನಾ ಸಂದಿಗ್ಧತೆಯ ಸಮಯದಲ್ಲಿ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಮನಸ್ಸು ಕಸಿವಿಸಿಯಾಗುತ್ತದೆ. ಆದರೆ, ಬ್ರಹ್ಮಾವರ ಸಮೀಪದ ಕೋಟದಲ್ಲಿ ಕೊರೊನಾ ಸೋಂಕು ತಗುಲಿದ ಒಂದೇ ಕುಟುಂಬದ 7 ಸದಸ್ಯರು ದೃತಿಗೆಡದೆ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಜತೆಗೆ, ಸೋಂಕಿನ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾದರಿಯಾಗಿದ್ದಾರೆ.

ತಮ್ಮ ಕುಟುಂಬ ಕೋವಿಡ್‌ ಸೋಂಕಿನಿಂದ ಗುಣಮುಖರಾದ ಅನುಭವವನ್ನು ಕೋಟದ ರಮೇಶ್‌ ಪ್ರಭು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಜಿಲ್ಲಾಡಳಿತದ ಸೂಚನೆಯಂತೆ ಜುಲೈ 2ರಂದು ಕೋವಿಡ್‌ ಪರೀಕ್ಷೆ ಮಾಡಿಕೊಂಡಾಗ ನನಗೆ ನೆಗೆಟಿವ್ ಬಂತು. ದುರಾದೃಷ್ಟಕ್ಕೆ 85 ವರ್ಷದ ತಾಯಿ, 50 ವರ್ಷದ ಸಹೋದರ, 56 ವರ್ಷದ ಪತ್ನಿ, ಇಬ್ಬರು ಮಕ್ಕಳು, ಸೊಸೆ ಸೇರಿ ಕುಟುಂಬದ 7 ಸದಸ್ಯರಿಗೆ ಪಾಸಿಟಿವ್ ಬಂದಿತ್ತು.

‘ಸೋಂಕು ತಗುಲದ 4 ತಿಂಗಳ ಮೊಮ್ಮಗಳನ್ನೂ ಅನಿವಾರ್ಯವಾಗಿ ಕೋವಿಡ್‌ ಆಸ್ಪತ್ರೆಗೆ ಕಳುಹಿಸಬೇಕಾದ ಪರಿಸ್ಥಿತಿ ಕಂಡು ಮನಸ್ಸಿಗೆ ಬಹಳ ನೋವಾಯಿತು. ಆದರೂ ಮನಸ್ಸು ಗಟ್ಟಿಮಾಡಿಕೊಂಡು ಕುಟುಂಬದವರಿಗೆ ಧೈರ್ಯತುಂಬಿ ಆಂಬುಲೆನ್ಸ್‌ ಹತ್ತಿಸಿ ಕಳುಹಿಸಿದೆ. ಮನೆಯಲ್ಲಿ ನಾಲ್ಕು ವರ್ಷದ ಮೊಮ್ಮಗನ ಜತೆ ಉಳಿದುಕೊಂಡೆ’.

‘ಕುಂದಾಪುರದ ಸರ್ಕಾರಿ ಆಸ್ಪತ್ರೆ ಸೇರಿದ 2 ದಿನಕ್ಕೆ 4 ತಿಂಗಳ ಮೊಮ್ಮಗುವಿಗೂ ಸೋಂಕು ತಗುಲಿತು. ಮತ್ತೆ ಆತಂಕ ಶುರುವಾಯಿತು. ಆದರೆ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತೋರಿದ ಕಾಳಜಿ, ಮಾನವೀಯತೆ, ಔಷಧಕ್ಕಿಂತ ಮಿಗಿಲಾದ ಆತ್ಮವಿಶ್ವಾಸದ ಫಲವಾಗಿ ನಮ್ಮ ಕುಟುಂಬ ಕೋವಿಡ್‌ ವಿರುದ್ಧದ ಹೋರಾಟವನ್ನು ಗೆಲ್ಲಲು ಸಹಕಾರಿಯಾಯಿತು’ ಎಂದರು ರಮೇಶ್ ಪ್ರಭು.

ಆಸ್ಪತ್ರೆಯ ಒಂದೇ ಕೊಠಡಿಯಲ್ಲಿದ್ದ ಕುಟುಂಬದ ಸದಸ್ಯರು, ಭಯಬಿಟ್ಟು ಮನಸ್ಸಿಗೆ ಖುಷಿ ಕೊಡುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಹಿರಿಯರು ಭಜನೆ ಮಾಡಿದರೆ, ಕಿರಿಯರು ಮನರಂಜನೆ, ಹರಟೆಯ ಮೂಲಕ ಕಾಲ ಕಳೆದರು. ಮಗು ಜತೆಗಿದ್ದ ಕಾರಣ, ಸಮಯ ಕಳೆಯುವುದು ಕಷ್ಟವಾಗಲಿಲ್ಲ. 10 ದಿನಗಳಲ್ಲಿ ಎಲ್ಲರ ವರದಿ ನೆಗೆಟಿವ್ ಬಂದಿದ್ದು, ಮನೆಗೆ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕೊರೊನಾ ಬಗ್ಗೆ ಭಯಬೇಡ. ಅದೊಂದು ಸಾಮಾನ್ಯ ಶೀತ, ಜ್ವರದಂತಹ ಸೋಂಕು. ಹೆಚ್ಚೆಂದರೆ ವೃದ್ಧರಿಗೆ ಸಮಸ್ಯೆ ತಂದೊಡ್ಡಬಹುದು. ಆರೋಗ್ಯವಂತರು ಸುಲಭವಾಗಿ ಗುಣಮುಖರಾಗಬಹುದು. ಮಾಧ್ಯಮಗಳಲ್ಲಿ ಕೊರೊನಾ ಸೋಂಕನ್ನು ಹುಲಿಯಂತೆ ಬಿಂಬಿಸಲಾಗಿದೆ. ಕೊರೊನಾ ಬಂದರೆ ಸಾವು ಖಚಿತ ಎಂದು ನಂಬಿಸಲಾಗಿದೆ. ಈ ಭಯಬಿಟ್ಟು ಹೊರಬಂದರೆ ಸೋಂಕಿನಿಂದ ಗುಣಮುಖರಾದಂತೆ ಎಂದರು ರಮೇಶ್ ಪ್ರಭು.

‘ಮನಸ್ಥಿತಿ ಬದಲಾಗಬೇಕು‌’

ಕೊರೊನಾ ಸೋಂಕಿಗಿಂತಲೂ ಸಮಾಜದ ಮನಸ್ಥಿತಿ ಭಯಾನಕ. ಸೋಂಕಿನಿಂದ ಗುಣಮುಖರಾದವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಕೊರೊನಾ ಸೋಂಕಿನಿಂದ ಗುಣಮುಖರಾದವರ ಮನೆಗೆ ಹೋದರೆ, ಅಂಗಡಿ, ಹೋಟೆಲ್‌ಗಳಿಗೆ ಕಾಲಿಟ್ಟರೆ ಸೋಂಕು ತಗುಲುತ್ತದೆ ಎಂಬ ಭಯ ಬೇಡ. ವೈರಸ್‌ ನಿರ್ಧಿಷ್ಟ ಅವಧಿಯವರೆಗೆ ಮಾತ್ರ ಜೀವಂತವಿರುತ್ತದೆ ಎಂಬ ಸತ್ಯ ತಿಳಿಯಬೇಕು. ಮುಂದೆ, ಕೊರೊನಾದೊಟ್ಟಿಗೆ ಬದುಕಬೇಕಾದ ಸಂದರ್ಭ ಬರಲಿದ್ದು, ಇದಕ್ಕೆ ಜಾಗ್ರತೆಯೇ ಮದ್ದು. ಎಲ್ಲರೂ ಕಡ್ಡಾಯ ಮಾಸ್ಕ್ ಬಳಿಸಿದರೆ, ಅಂತರ ಕಾಯ್ದುಕೊಂಡರೆ, ಸರ್ಕಾರದ ನಿಯಮ ಪಾಲಿಸಿದರೆ ಕೊರೊನಾದಿಂದ ದೂರವಿರಬಹುದು.

–ರಮೇಶ್ ಪ್ರಭು, ಉದ್ಯಮಿ   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು