ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಹುಟ್ಟಿದ್ದು ವಿದ್ವಾಂಸರಿಂದಲ್ಲ; ಹಳ್ಳಿಗಾಡಿನ ಜನರಿಂದ: ಬಾಬು ಶಿವ ಪೂಜಾರಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಾಬು ಶಿವ ಪೂಜಾರಿ
Published 6 ಡಿಸೆಂಬರ್ 2023, 7:14 IST
Last Updated 6 ಡಿಸೆಂಬರ್ 2023, 7:14 IST
ಅಕ್ಷರ ಗಾತ್ರ

ಬ್ರಹ್ಮಾವರ (ಮಂಡಾಡಿ ಮಾದಪ್ಪ ಉರಾಳ ವೇದಿಕೆ): ಪ್ರಪಂಚದ ಯಾವುದೇ ಭಾಷೆಗಳು ವಿಜ್ಞಾನಿಗಳಿಂದ, ದಾರ್ಶನಿಕರಿಂದ, ಸಾಹಿತಿಗಳಿಂದ ಹುಟ್ಟಿದವುಗಳಲ್ಲ; ಕಾಡು ಮೇಡು, ಹಳ್ಳಿಗಳಲ್ಲಿರುವ ಜನ ಸಾಮಾನ್ಯರಿಂದ ಜನ್ಮತಾಳಿವೆ. ಅನಕ್ಷರಸ್ಥರೇ ಜಗತ್ತಿನ ಎಲ್ಲಾ ಭಾಷೆಗಳ ಜನಕರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ ಅಭಿಪ್ರಾಯಪಟ್ಟರು.

ಕೋಟದ ವಿವೇಕ ವಿದ್ಯಾಲಯ ಆವರಣದಲ್ಲಿ ಮಂಗಳವಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಶಿಷ್ಟ ಭಾಷೆಗಳಿಗೂ ಗ್ರಾಮ್ಯ ಭಾಷೆಗಳೇ ಮೂಲ ಸೆಲೆ. ಕನ್ನಡ ಭಾಷೆಗೆ ನೂರಾರು ಗ್ರಾಮ್ಯ ಹಾಗೂ ಉಪ ಭಾಷೆಗಳು. ಗ್ರಾಮ್ಯ ಭಾಷೆಗಳ ಬಳಕೆ ತ್ಯಜಿಸುತ್ತಿರುವ ಪರಿಣಾಮ ಗ್ರಾಮ್ಯ ಶಬ್ದಗಳು ಮರೆಯಾಗುತ್ತಿವೆ. ಶಿಷ್ಟ ಭಾಷೆಗಳು ಬರಡಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡ ಭಾಷೆ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಬೇಕಾದರೆ ಶಿಷ್ಟ ಕನ್ನಡ ಭಾಷೆಯ ಬೇರು ಗ್ರಾಮಗಳ ಮಣ್ಣಿನಲ್ಲೂ, ಅದರ ಜೀವಾಳ ಗ್ರಾಮಗಳ ಜನಪದದಲ್ಲೂ, ಅದರ ಉಸಿರು ಗ್ರಾಮೀಣರ ಜನಜೀವನದಲ್ಲೂ ಬೆರೆಯಬೇಕು. ಭಾಷೆ ಎಂಬ ವೈವಿದ್ಯತೆಗಳ ಚಿಗುರು ಮುರುಟದಂತೆ, ಕರುಟದಂತೆ, ಸಾಯದಂತೆ ಕಾಯಬೇಕಿದೆ. ಗ್ರಾಮ್ಯ ಕನ್ನಡ ನಾಶವಾದರೆ ಶಿಷ್ಟ ಕನ್ನಡವೂ ಅಳಿಯುತ್ತದೆ ಎಂಬ ಗಂಭೀರ ಸತ್ಯವನ್ನು ಅರಿಯಬೇಕಿದೆ ಎಂದರು.

ಸ್ವಾತಂತ್ರಪೂರ್ವದಲ್ಲಿ ಮೇಲ್ವರ್ಗದವರು ಹಾಗೂ ಶ್ರೀಮಂತರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಕಳಿಸಿ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿದರು. ಅದೇ ಪರಂಪರೆಯನ್ನು ಪ್ರಸ್ತುತ, ರಾಜಕಾರಣಿಗಳು, ಶ್ರೀಮಂತರು ಮುಂದುವರಿಸಿದ್ದಾರೆ. ರೈತರು, ಬಡವರ ಮಕ್ಕಳಿಗೆ ಮಾತ್ರ ಸರ್ಕಾರಿ ಶಾಲೆಗಳ ಕನ್ನಡ ಕಲಿಕೆ ಮೀಸಲಾಗಿದೆ. ಕನ್ನಡ ಎರಡನೇ ದರ್ಜೆ ಭಾಷೆಯಾಗಿ ತಳ್ಳಲ್ಪಟ್ಟಿದೆ. ಇಂಗ್ಲೀಷ್‌ ವ್ಯಾಮೋಹದಿಂದ ಕನ್ನಡ ಕಳೆಗುಂದಿದೆ, ನೆಲೆ ತಪ್ಪಿದೆ, ಕೀಳರಿಮೆಗೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಹಚ್ಚೇವು ಕನ್ನಡದ ದೀಪ’ ಎಂದು ಕುಣಿದಾಡಿದ್ದ ಕನ್ನಡ ನಾಡಿನ ಜನ ಮುಕ್ಕಾಲು ಶತಮಾನ ಕಳೆಯುವುದರೊಳಗೆ ಮನೆಗಳಲ್ಲಿ ಕನ್ನಡ ದೀಪ ಬದಿಗಿಟ್ಟು ಇಂಗ್ಲೀಷ್ ದೀಪ ಬೆಳಗುತ್ತಿದ್ದಾರೆ. ಕನ್ನಡ ದೀಪದ ಬೆಳಕು ಮಂದವಾಗಲು ರಾಜಕಾರಣಿಗಳು, ಸಾಹಿತಿಗಳು, ಶ್ರೀಮಂತರು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆ ಸಾಹಿತ್ಯಕವಾಗಿ ಶ್ರೀಮಂತ ಭಾಷೆ ಎನ್ನುವುದರಲ್ಲಿ ಸಂಶಯವಿಲ್ಲ. 2008ರಲ್ಲಿ ಶಾಸ್ತ್ರೀಯ ಸ್ಥಾನಮಾನದ ಗೌರವವೂ ಕನ್ನಡಕ್ಕೆ ಸಂದಿದೆ. ಇದಾದ ಎರಡೇ ವರ್ಷದಲ್ಲಿ 10 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಅಂದಿನ ಸರ್ಕಾರ ತೆಗೆದುಕೊಂಡಿದ್ದು ಕನ್ನಡ ಭಾಷೆಯ ಹಾಗೂ ಕನ್ನಡಿಗರ ದುರ್ದೈವ ಎಂದು ವಾಗ್ದಾಳಿ ನಡೆಸಿದರು.

ಕನ್ನಡ ಶಾಲೆಗಳು ಉಳಿಯಬೇಕಿದ್ದು, ಮೂಲಸೌಕರ್ಯ ಕಲ್ಪಿಸಬೇಕು. ಆಧುನಿಕ ತಂತ್ರಜ್ಞಾನ ಬಳಕೆಯಾಗಬೇಕು. ಕನ್ನಡದಲ್ಲಿ ಕಲಿತವರಿಗೆ ಉದ್ಯೋಗ ಸಿಗಬೇಕು, ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳಲ್ಲಿ ಕನ್ನಡ ಆಡಳಿತ ಭಾಷೆಯಾಗಿರಬೇಕು. ಕನ್ನಡ ಅನ್ನ ತರುವ ಭಾಷೆಯಾದರೆ ಕನ್ನಡದ ಸಂಕಟಗಳು ಕಡಿಮೆ ಆಗಬಹುದು. ಕನ್ನಡ ಉಳಿಸಲು ಬೆಳೆಸಲು ಅದಮ್ಯ ಭಾಷಾ ಪ್ರೇಮ ನಮ್ಮೊಳಗೆ ಬೆಳೆಯಲಿ ಎಂದು ಆಶಿಸಿದರು.

ಕನ್ನಡದ ಪ್ರಾಚೀನತೆ ಮತ್ತು ವ್ಯಾಪಕತ್ವ

ಕನ್ನಡ ಲಿಪಿಗೆ 2000 ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. 3ನೇ ಶತಮಾನದ್ದು ಎನ್ನಲಾದ ಬೌದ್ಧ ಕೃತಿ ‘ಲಲಿತ ವಿಸ್ತಾರ’ದಲ್ಲಿ ಉಲ್ಲೇಖಗೊಂಡಿರುವ 64 ಲಿಪಿಗಳಲ್ಲಿ ‘ಕಾನಾಡಿ ಲಿಪಿ’ ಕನ್ನಡ ಲಿಪಿಯ ಮೂಲ ಆಗಿರಬಹುದು ಎಂದು ಹೇಳಲಾಗಿದೆ. 2008ರ ಡಿಸೆಂಂಬರ್‌ನಲ್ಲಿ ಬಿಡುಗಡೆಯಾದ ಯುನೆಸ್ಕೋ ಭಾಷಾ ನಕ್ಷೆಯ ಪ್ರಕಾರ ಪ್ರಪಂಚದಾದ್ಯಂತ ಬಳಕೆಯಲ್ಲಿದ್ದ 6700ಕ್ಕೂ ಹೆಚ್ಚು ಭಾಷೆಗಳಲ್ಲಿ ಅರ್ಧಕ್ಕೂ ಹೆಚ್ಚಿನ ಭಾಷೆಗಳು ಅಳಿವಿನಂಚಿನಲ್ಲಿವೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. 1961ರ ಜನಗಣತಿ ಪ್ರಕಾರ ದೇಶದಲ್ಲಿ 1652 ಮಾತೃಭಾಷೆಗಳು ದಾಖಲಾಗಿದ್ದು ಕರ್ನಾಟಕದಲ್ಲಿ 176 ಭಾಷೆಗಳನ್ನು ಗುರುತಿಸಲಾಗಿದೆ. ದಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ಪ್ರಕಾರ 780 ಭಾಷೆಗಳನ್ನು ಭಾರತೀಯರು ಬಳಸುತ್ತಿದ್ದಾರೆ. ಅವುಗಳಲ್ಲಿ 22 ಭಾಷೆಗಳನ್ನು ಅನುಸೂಚಿತ ಭಾಷೆಗಳು ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ ಕನ್ನಡದ ಪ್ರಾಚೀನತೆ ಮತ್ತು ವ್ಯಾಪಕತ್ವವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT