ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಜಾರು ಕೊಲೆ ಪ್ರಕರಣ: ನಾಲ್ವರನ್ನು ಕೊಂದು ಅಡುಗೆ ಮನೆಯಲ್ಲಿ ಚಾಕು ಇಟ್ಟಿದ್ದ!

ಆರೋಪಿಯ ಕೃತ್ಯ ತನಿಖೆಯಲ್ಲಿ ಬಹಿರಂಗ
Published 23 ನವೆಂಬರ್ 2023, 15:33 IST
Last Updated 23 ನವೆಂಬರ್ 2023, 15:33 IST
ಅಕ್ಷರ ಗಾತ್ರ

ಉಡುಪಿ: ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಆರೋಪಿ ಪ್ರವೀಣ್ ಅರುಣ್ ಚೌಗಲೆ ತನಿಖೆಯಲ್ಲಿ ಕೊಲೆಗೆ ಕಾರಣಗಳನ್ನು ಬಹಿರಂಗಪಡಿಸಿದ್ದಾನೆ. ಸಹೋದ್ಯೋಗಿ ಅಯ್ನಾಜ್‌ ಮೇಲಿನ ಅಸೂಹೆ ಹಾಗೂ ದ್ವೇಷದಿಂದ ಆಕೆಯನ್ನು ಕೊಲ್ಲಲು ಹೋದಾಗ ಪ್ರತಿರೋಧ ತೋರಿದ ಕುಟುಂಬದ ಮೂವರನ್ನು ಕೊಲೆ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.

ಕೊಲೆಗೆ ತಯಾರಿ ನಡೆಸಿದ್ದು ಹೇಗೆ: ತೀರಾ ಹಚ್ಚಿಕೊಂಡಿದ್ದ ಸ್ನೇಹಿತೆ ಏಕಾಏಕಿ ಸ್ನೇಹ ಕಡಿದುಕೊಂಡಿದ್ದಕ್ಕೆ ಆಕ್ರೋಶಗೊಂಡಿದ್ದ ಪ್ರವೀಣ್ ಚೌಗಲೆ ಅಯ್ನಾಜ್‌ಳನ್ನು ಕೊಲ್ಲಲು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದ. ತಾಂತ್ರಿಕವಾಗಿ ಪರಿಣಿತನಾಗಿದ್ದ ಆರೋಪಿ ‌ಮೊಬೈಲ್‌ನ ಆ್ಯಪ್‌ವೊಂದರಿಂದ ಯುವತಿಯ ಮನೆಯ ವಿಳಾಸ ಪತ್ತೆ ಹಚ್ಚಿದ್ದ. 

ಚಾಲಾಕಿ ಹಂತಕ: ಟೋಲ್‌ಗೇಟ್‌ ಮೂಲಕ ಪ್ರವೇಶಿಸಿದರೆ ಸಿಕ್ಕಿಬೀಳಬಹುದು ಎಂಬ ಭಯದಿಂದ ವಾಹನವನ್ನು ಟೋಲ್‌ಗೇಟ್‌ನಿಂದ ದೂರ ನಿಲ್ಲಿಸಿ ಬಸ್‌ನಲ್ಲಿ ಉಡುಪಿಯ ಸಂತೆಕಟ್ಟೆಗೆ ಬಂದಿಳಿದಿದ್ದ. ಅಲ್ಲಿಂದ ನೇಜಾರಿನ ತೃಪ್ತಿ ಲೇಔಟ್‌ಗೆ ಆಟೊದಲ್ಲಿ ತೆರಳಿದ್ದ. ಮೊದಲೇ ಚೌಗಲೆಯ ಪರಿಚಯವಿದ್ದ ಕಾರಣ ಅಯ್ನಾಜ್ ಆತನಿಗೆ ಮನೆಯೊಳಗೆ ಪ್ರವೇಶಿಸಲು ಅನುಮತಿ ನೀಡಿದ್ದಾರೆ.

ಮನೆಯೊಳಗೆ ಹೋದ ಹಂತಕ ಮೊದಲು ಚಾಕುವಿನಿಂದ ಅಯ್ನಾಜ್‌ಗೆ ಇರಿದು ಕೊಂದಿದ್ದಾನೆ. ಬಳಿಕ ತಾಯಿ ಹಸೀನಾ, ಸಹೋದರಿ ಅಫ್ನಾನ್‌ಗೂ ಚೂರಿ ಇರಿದಿದ್ದಾನೆ. ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಜ್ಜಿ ಹಾಜಿರಾಗೂ ಚೂರಿ ಹಾಕಿದ್ದು ಅದೃಷ್ಟವಶಾತ್ ತಪ್ಪಿಸಿಕೊಂಡು ಶೌಚಾಲಯದೊಳಗೆ ತೆರಳಿ ಜೀವ ಉಳಿಸಿಕೊಂಡಿದ್ದಾರೆ. ಹಂತಕ ಒಬ್ಬೊಬ್ಬರನ್ನೇ ಕೊಲೆ ಮಾಡಿದ್ದರಿಂದ ಸಲೀಸಾಗಿ ಕೃತ್ಯ ಎಸಗಲು ಸಾಧ್ಯವಾಯಿತು ಎಂದು ಎಸ್‌ಪಿ ಮಾಹಿತಿ ನೀಡಿದರು.

ಅಪರಾಧ ಕೃತ್ಯಗಳ ತಡೆಗೆ ಹಾಗೂ ಪತ್ತೆ ಹೆಚ್ಚಲು ಉಡುಪಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಕ್ಯಾಮೆರಾ ಹಾಕಬೇಕು ಎಂಬ ವರದಿಯನ್ನು ತಿಂಗಳ ಅಂತ್ಯಕ್ಕೆ ಸಿದ್ಧಪಡಿಸಿ  ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು.
–ಡಾ.ಕೆ.ಅರುಣ್‌ ಎಸ್‌ಪಿ

ಮಾದಕ ವ್ಯಸನ ಸೇವಿಸಿದ್ದನೇ?: ಕೃತ್ಯ ಎಸಗುವ ಸಂದರ್ಭ ಆರೋಪಿ ಮಾದಕ ದ್ರವ್ಯ ಸೇವನೆ ಮಾಡಿದ್ದನೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆರೋಪಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು ವರದಿ ಬಂದ ಬಳಿಕ ಸತ್ಯ ಹೊರಬೀಳಲಿದೆ ಎಂದು ಎಸ್‌ಪಿ ತಿಳಿಸಿದರು.

ಮೊಬೈಲ್‌ನಲ್ಲಿ ಸಾಕ್ಷ್ಯ: ಆರೋಪಿ ಹಾಗೂ ಮೃತ ಯುವತಿಯ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆ ನಡೆಯುತ್ತಿದೆ. ಯುವತಿ ಹಾಗೂ ಆರೋಪಿಯ ನಡುವಿನ ಹಣಕಾಸಿನ ವ್ಯವಹಾರ ಸೇರಿದಂತೆ ಇತರ ಎಲ್ಲ ಮಾಹಿತಿಗಳು ಶೀಘ್ರ ಸಿಗಲಿವೆ ಎಂದು ಹೇಳಿದರು.

ಪತ್ನಿಯ ಸಂಬಂಧಿ ಮನೆಯಲ್ಲಿ ವಾಸ್ತವ್ಯ: ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಆರೋಪಿ ಪತ್ನಿಯ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡಿದ್ದು ಅವರನ್ನು ವಿಚಾರಣೆಗೊಳಪಡಿಸಲಾಗಿದ್ದು ಉದ್ದೇಶಪೂರ್ವಕವಾಗಿ ಕೊಲೆ ಆರೋಪಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್‌ಪಿ ತಿಳಿಸಿದರು.

ಆರ್ಥಿಕವಾಗಿ ಸ್ಥಿತಿವಂತ: ಆರೋಪಿ ತಿಂಗಳಿಗೆ ₹70,000ದಷ್ಟು ವೇತನ ಪಡೆಯುತ್ತಿದ್ದು ಆರ್ಥಿಕವಾಗಿ ಸ್ಥಿತಿವಂತನಾಗಿದ್ದ. ಆತನ ಬ್ಯಾಂಕ್‌ ಖಾತೆ ಹಾಗೂ ಆಸ್ತಿಯ ಬಗ್ಗೆ ಪರಿಶೀಲಿಸಲಾಗಿದ್ದು ಮೇಲ್ನೋಟಕ್ಕೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಮೃತರ ಕುಟುಂಬ ಸದಸ್ಯರ ಸಹಕಾರ: ಪ್ರಕರಣ ಪತ್ತೆ ಹಚ್ಚಲು ಮೃತರ ಕುಟುಂಬದ ಸದಸ್ಯರು ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರ ನೀಡಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯ ಹಾಗೂ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣದ ಶೀಘ್ರ ವಿಚಾರಣೆಗೆ ವಿಶೇಷ ಪಬ್ಲಿಕ್ ಪ್ಯಾಸಿಕ್ಯೂಟರ್ ನೇಮಕಕ್ಕೆ ಪೊಲೀಸ್ ಇಲಾಖೆಯಿಂದ ಮನವಿ ಸಲ್ಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಸಂಘಟಿತ ಶ್ರಮ: ಆರೋಪಿಯ ಪತ್ತೆಗೆ ಆರಂಭದಲ್ಲಿ 5 ತಂಡಗಳನ್ನು ರಚಿಸಲಾಗಿತ್ತು. ಪ್ರಕರಣ ಜಟಿಲಗೊಂಡಿದ್ದರಿಂದ ಮತ್ತೆ 6 ತಂಡಗಳನ್ನು ರಚಿಸಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಯಿತು. ಸವಾಲಿನಿಂದ ಕೂಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿಯ ಸಂಘಟಿತ ಶ್ರಮವಿದೆ. ಕಾರ್ಯಾಚರಣೆ ತಂಡಕ್ಕೆ ₹1.5 ಲಕ್ಷ ನಗದು ಪುರಸ್ಕಾರ ನೀಡಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಎಸ್‌ಪಿ ಹೇಳಿದರು.

ಕ್ರಿಮಿನಲ್‌ ಇತಿಹಾಸ ಇಲ್ಲ

ಆರೋಪಿ ಪ್ರವೀಣ್ ಅರುಣ್ ಚೌಗಲೆ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 2007ರಲ್ಲಿ ಪುಣೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಆತ ತರಬೇತಿ ಅವಧಿಯಲ್ಲಿಯೇ ಕೆಲಸ ಬಿಟ್ಟು ಏರ್ ಇಂಡಿಯಾ ಸಂಸ್ಥೆಗೆ ಸೇರಿಕೊಂಡಿದ್ದ. 8 ತಿಂಗಳ ಹಿಂದಷ್ಟೆ ಕೆಲಸಕ್ಕೆ ಸೇರಿದ್ದ ಅಯ್ನಾಜ್ ಜತೆಗೆ ಸ್ನೇಹ ಬೆಳೆದಿತ್ತು.

‘ಅಡುಗೆ ಮನೆಯಲ್ಲಿಯೇ ಇಟ್ಟಿದ್ದ ಚಾಕು’
ನಾಲ್ವರನ್ನು ಅಮಾನುಷವಾಗಿ ಇರಿದು ಕೊಂದಿದ್ದ ಆರೋಪಿ ಚೌಗಲೆ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ತನ್ನ ಮನೆಯ ಅಡುಗೆ ಮನೆಯಲ್ಲಿಯೇ ಇಟ್ಟಿದ್ದ. ಕೊಲೆ ಮಾಡುವಾಗ ಕೈಗೆ ಚೂರಿ ತಾಗಿ ಗಾಯಗೊಂಡಿದ್ದ ಚೌಗಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದು ಪತ್ನಿಯ ಬಳಿ ಸುಳ್ಳು ಹೇಳಿ ಅನುಮಾನ ಬಾರದಂತೆ ನಡೆದುಕೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT