ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಜಾರು ಕೊಲೆ ಪ್ರಕರಣ | ಸ್ನೇಹ ಕಡಿದುಕೊಂಡಿದ್ದಕ್ಕೆ ಕೃತ್ಯ: ಎಸ್‌ಪಿ

Published 23 ನವೆಂಬರ್ 2023, 15:36 IST
Last Updated 23 ನವೆಂಬರ್ 2023, 15:36 IST
ಅಕ್ಷರ ಗಾತ್ರ

ಉಡುಪಿ: ‘ಕೊಲೆಯಾದ ಯುವತಿ ಅಯ್ನಾಜ್‌ ಮೇಲಿನ ಅತಿಯಾದ ಅಸೂಯೆ ಹಾಗೂ ದ್ವೇಷ ನಾಲ್ವರ ಕೊಲೆಗೆ ಕಾರಣ ಎಂಬ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ತಿಳಿಸಿದರು.

ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ನ.11ರಂದು ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ಸಂಬಂಧ ಗುರುವಾರ ಅವರು ಮಾಹಿತಿ ನೀಡಿದರು.

‘ಆರೋಪಿ ಪ್ರವೀಣ್‌ ಅರುಣ್ ಚೌಗಲೆ ಹಾಗೂ ಕೊಲೆಯಾದ ಅಯ್ನಾಜ್ (20) ಮಂಗಳೂರಿನಲ್ಲಿ ಏರ್ ಇಂಡಿಯಾ ಸಂಸ್ಥೆಯಲ್ಲಿ ಸಹೋದ್ಯೋಗಿಗಳಾಗಿದ್ದರು. ಇಬ್ಬರ ಮಧ್ಯೆ 8 ತಿಂಗಳಿನಿಂದ ಸ್ನೇಹವಿತ್ತು. ಯುವತಿಗೆ ಮಂಗಳೂರಿನ ಬಿಜೈನಲ್ಲಿ ಫ್ಲ್ಯಾಟ್‌ ಬಾಡಿಗೆ ಕೊಡಿಸಲು ಸಹಾಯ ಮಾಡಿದ್ದ ಆತ, ಆಕೆಗೆ ತನ್ನ ಸ್ಕೂಟರ್ ಕೂಡ ನೀಡಿದ್ದ. ತಿಂಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಇಬ್ಬರೂ ದೂರವಾಗಿದ್ದರು. ಯುವತಿ ಏಕಾಏಕಿ ಸ್ನೇಹ ಕಡಿದುಕೊಂಡಿದ್ದಕ್ಕೆ, ಮಾತು ಬಿಟ್ಟಿದ್ದಕ್ಕೆ ಮಾನಸಿಕವಾಗಿ ಕುಗ್ಗಿಹೋಗಿದ್ದ. ಕೊಲೆಗೆ ಸಂಚು ರೂಪಿಸಿದ್ದ’ ಎಂದು ಎಸ್‌ಪಿ ತಿಳಿಸಿದರು.

‘ಯುವತಿ ಅಯ್ನಾಜ್ ಇರುವ ಸ್ಥಳವನ್ನು ಮೊಬೈಲ್‌ ಆ್ಯಪ್ ಮೂಲಕ ಪತ್ತೆ ಹಚ್ಚಿದ್ದ ಆರೋಪಿಯು ನ.11ರಂದು ಬೆಳಿಗ್ಗೆ ಉಡುಪಿ ತಾಲ್ಲೂಕಿನ ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ಬಂದಿದ್ದಾನೆ. ಮೊದಲು ಅಯ್ನಾಜ್‌ಗೆ ಚಾಕುವಿನಿಂದ ಇರಿದಿದ್ದಾನೆ. ಮಗಳ ಚೀರಾಟ ಕಂಡು ರಕ್ಷಣೆಗೆ ಧಾವಿಸಿದ ತಾಯಿ ಹಸೀನಾಗೂ ಇರಿದಿದ್ದಾನೆ. ಪ್ರತಿರೋಧ ತೋರಿದ ಸಹೋದರಿ ಅಫ್ನಾನ್‌ಗೂ ಚಾಕುವಿನಿಂದ ಚುಚ್ಚಿದ್ದಾನೆ. ಕುಟುಂಬ ಸದಸ್ಯರ ಚೀರಾಟ ಕಂಡು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ 14 ವರ್ಷದ ಅಸೀಮ್‌ ಮನೆಯೊಳಗೆ ಬಂದಾಗ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಬಾಲಕನನ್ನೂ ಹತ್ಯೆ ಮಾಡಿದ್ದಾನೆ’ ಎಂದು ಘಟನೆಯನ್ನು ಬಿಚ್ಚಿಟ್ಟರು.

‘ಕೊಲೆಗೆ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿದ್ದ ಆರೋಪಿ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಕಾರನ್ನು ಟೋಲ್‌ಗೇಟ್‌ಗೂ ಹಿಂದೆಯೇ ನಿಲ್ಲಿಸಿ ಬಸ್‌ನಲ್ಲಿ ಉಡುಪಿಗೆ ಬಂದಿದ್ದ. ಕೊಲೆ ಮಾಡಿದ ಬಳಿಕ ರಕ್ತಸಿಕ್ತ ಬಟ್ಟೆಯನ್ನು ಮೂಲ್ಕಿ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟುಹಾಕಿ, ಕೊಲೆಗೆ ಬಳಸಿದ್ದ ಚಾಕುವನ್ನು ತನ್ನ ಮನೆಯ ಅಡುಗೆ ಮನೆಯಲ್ಲಿಯೇ ಇಟ್ಟಿದ್ದ’.

‘ಆರೋಪಿ ಪತ್ತೆಗೆ ರಚಿಸಲಾಗಿದ್ದ 11 ತಂಡಗಳು ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸಿದ್ದವು. ಬೆಳಗಾವಿ ಜಿಲ್ಲೆ ಕುಡಚಿಯ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು. ಮೃತ ಕುಟುಂಬ ಸದಸ್ಯರ ಮನವಿಯ ಮೇರೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಕ್ಕೆ ಮನವಿ ಮಾಡಲಾಗಿದೆ’ ಎಂದು ಎಸ್‌ಪಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT