ಉಡುಪಿ: ತಾಯಿ ಹಾಗೂ ಮೂವರು ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಗುರುವಾರ ಸಂಜೆ ಸ್ಥಳಕ್ಕೆ ಮಹಜರು ಪ್ರಕ್ರಿಯೆಗೆ ಕರೆತಂದಿದ್ದ ವೇಳೆ ಉದ್ರಿಕ್ತ ಗುಂಪು ಏಕಾಏಕಿ ಆರೋಪಿ ಮೇಲೆ ದಾಳಿಗೆ ಮುಂದಾದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ನೇಜರಿನ ತೃಪ್ತಿ ಲೇಔಟ್‌ನಲ್ಲಿ ಕೊಲೆ ನಡೆದ ಸ್ಥಳ ಮಹಜರು ಮುಗಿಸಿ ಆರೋಪಿಯನ್ನು ವಾಪಸ್ ಕರೆದೊಯ್ಯುವಾಗ ನೂರಾರು ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಸರಿಸಿ ಆರೋಪಿಯ ಮೇಲೆ ಹಲ್ಲೆಗೆ ಮುಂದಾದರು. ಈ ಸಂದರ್ಭ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದರು. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡರು.
ಆರೋಪಿ ಇದ್ದ ವಾಹನವನ್ನು ಬಿಗಿ ಭದ್ರತೆಯ ಮೂಲಕ ಕೊಂಡೊಯ್ಯಲಾಯಿತು. ಬಳಿಕ ಪೊಲೀಸರ ಲಾಠಿ ಪ್ರಹಾರ ಖಂಡಿಸಿ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಾಲ್ವರನ್ನು ಅಮಾನುಷವಾಗಿ ಕೊಂದಿರುವ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಘೋಷಣೆ ಕೂಗಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಬೇಕು ಎಂದು ಪಟ್ಟುಹಿಡಿದು ರಸ್ತೆ ಮೇಲೆ ಪ್ರತಿಭಟನೆ ನಡೆಸಿದ ಪರಿಣಾಮ ಒಂದೂವರೆ ತಾಸಿಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರಕರಣದ ವಿಚಾರಣೆಗೆ ಅಡ್ಡಿಪಡಿಸಬಾರದು, ಆರೋಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಲಿದೆ ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.