ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸೀವೇವ್ ಬ್ರೇಕರ್‌, ಡಕ್‌ ಫುಟ್‌ ಪ್ರಾಯೋಗಿಕ ಅನುಷ್ಠಾನ

ಕಡಲ್ಕೊರೆತ ಸಮಸ್ಯೆ ತಡೆಗೆ ಶಾಶ್ವತ ಯೋಜನೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ
Last Updated 6 ಜುಲೈ 2022, 14:11 IST
ಅಕ್ಷರ ಗಾತ್ರ

ಉಡುಪಿ: ಕರಾವಳಿ ಭಾಗದಲ್ಲಿ ಶಾಶ್ವತವಾಗಿ ಕಡಲ್ಕೊರೆತ ಸಮಸ್ಯೆ ತಡೆಗೆ ಪ್ರಯೋಗಿಕವಾಗಿ ಸೀವೇವ್ ಬ್ರೇಕರ್ ಹಾಗೂ ಡಕ್‌ ಫುಟ್‌ ಯೋಜನೆ ಅನುಷ್ಠಾನಗೊಳಿಸುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಕಾಸರಗೋಡು ಜಿಲ್ಲೆಯ ನಲ್ಲಿಕುಂದ ಭಾಗದಲ್ಲಿ ಸೀವೇವ್‌ ಬ್ರೇಕರ್ ಯೋಜನೆ ಅನುಷ್ಠಾನಗೊಂಡಿದ್ದು, ಅಲ್ಲಿಗೆ ಭೇಟಿನೀಡಿ ಪರಿಶೀಲಿಸಲಾಗಿದೆ. 320 ಕಿ.ಮೀ ಕರಾವಳಿಯಲ್ಲಿ ಹೆಚ್ಚು ಕಡಲ್ಕೊರೆತ ಸಮಸ್ಯೆ ಇರುವ ಉಳ್ಳಾಲ ಹಾಗೂ ಉಚ್ಚಿಲದ ಬಟ್ಟಂಪಾಡಿಯಲ್ಲಿ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂದರು.

ಸ್ಥಳೀಯರು ಯೋಜನೆಯ ಬಗ್ಗೆ ಆಕ್ಷೇಪಗಳು ವ್ಯಕ್ತಪಡಿಸಿದ್ದು ಅವರ ಸಲಹೆಯಂತೆ ಎಲ್ಲಿ ಸಾಧ್ಯವೋ ಅಲ್ಲಿ ಮಾತ್ರ ಸೀವೇವ್‌ ಬ್ರೇಕರ್ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗೆ ಯೋಜನಾ ವರದಿ ಸಲ್ಲಿಸಲಾಗಿದ್ದು, ತಜ್ಞರ ಅಭಿಪ್ರಾಯ ಪಡೆದು ಅನುಷ್ಠಾನದ ಬಗ್ಗೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಬೈಂದೂರು ತಾಲ್ಲೂಕಿನ ಮರವಂತೆ ಭಾಗದಲ್ಲಿ ಡಕ್ ಫುಟ್ ಯೋಜನೆ ಅನುಷ್ಠಾನಕ್ಕೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು ಈಗಾಗಲೇ ಸಂಸ್ಥೆಯ ಪ್ರತಿನಿಧಿಗಳು ಮರವಂತೆ ಭಾಗದಲ್ಲಿ ಪರಿಶೀಲಿಸಿದ್ದಾರೆ. ಕರಾವಳಿ ಭಾಗದಲ್ಲಿ ಕಡಲ್ಕೊರೆತ ತಡೆಗೆ ತಾತ್ಕಾಲಿಕ ಹಾಗೂ ಶಾಶ್ವತ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಜುಲೈ 10ರಂದು ಮೂರು ಜಿಲ್ಲೆಯ ಸಚಿವರನ್ನೊಳಗೊಂಡ ನಿಯೋಗ ಸಿಎಂ ಅವರನ್ನು ಭೇಟಿ ಮಾಡಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಕಿ ಕಾಮಗಾರಿಗಳ ಪೂರ್ಣಕ್ಕೆ ಹಾಗೂ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉಡುಪಿಯಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಪ್ರದೇಶಗಳಲ್ಲಿ ನೀರು ಹರಿದುಹೋಗುವ ವ್ಯವಸ್ಥೆ ಮಾಡಲಾಗುವುದು. ಉತ್ತರ ಕನ್ನಡ, ದಕ್ಷಿಣ ಕನ್ನಡ,ಹಾಗೂ ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಸಂಭವಿಸಿರುವ ನೆರೆ ಹಾನಿ ವರದಿಯನ್ನು ಆಯಾ ಜಿಲ್ಲಾಧಿಕಾರಿಗಳಿಂದ ಪಡೆದು ಮುಖ್ಯಮಂತ್ರಿಗೆ ಸಲ್ಲಿಸಿ ಅಗತ್ಯ ಅನುದಾನ ಪಡೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT