ಶನಿವಾರ, ಜನವರಿ 28, 2023
24 °C
ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ವಿವೇಕಾನಂದ, ಸರಸ್ವತಿ ಪುತ್ಥಳಿ ಅನಾವರಣ

‘ವಿದ್ಯೆ ಎಲ್ಲಕ್ಕಿಂತ ಮಿಗಿಲಾದ ಶಾಶ್ವತ ಆಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ‘ನಮ್ಮಲ್ಲಿ ಎಷ್ಟು ಸಂಪತ್ತು ಇದೆ ಎನ್ನುವುದಕ್ಕಿಂತ, ಇರುವ ಸಂಪತ್ತಿನ ಸದ್ವಿನಿಯೋಗದ ಕುರಿತು ಚಿಂತನೆ ಮಾಡಬೇಕು. ಸಂಪತ್ತು ಎಲ್ಲ ಕಾಲಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಕೆಲವೊಮ್ಮೆ ಅತಿಯಾದ ಸಂಪತ್ತು, ಆಪತ್ತಿಗೂ ಕಾರಣವಾಗುತ್ತದೆ. ವಿದ್ಯೆ ಎನ್ನುವ ಅಮೂಲ್ಯವಾದ ಶಾಶ್ವತ ಸಂಪತ್ತು ನಮ್ಮೊಂದಿಗೆ ಇದ್ದಾಗ, ಎಲ್ಲ ಸಂಪತ್ತಿನ ಸರಿಯಾದ ಬಳಕೆಗೆ ಮಾರ್ಗದರ್ಶನ ದೊರಕುತ್ತದೆ’ ಎಂದು ಉಡುಪಿ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಕೋಟೇಶ್ವರ ಸಮೀಪದ ವಕ್ವಾಡಿಯ ಗುರುಕುಲ ಪಬ್ಲಿಕ್‌ ಸ್ಕೂಲ್ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರು ಹಾಗೂ ಸರಸ್ವತಿ ದೇವಿಯ ಪುತ್ಥಳಿಯನ್ನು ಅನಾರಣಗೊಳಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ದುಡ್ಡಿನಿಂದ ಎಲ್ಲವನ್ನು ಪಡೆದುಕೊಳ್ಳಬಹುದು ಎನ್ನುವುದು ಭ್ರಮೆ. ಶಾಂತಿ, ನೆಮ್ಮದಿ, ಪ್ರೀತಿ, ಆರೋಗ್ಯ ಸೇರಿದಂತೆ ಹಲವು ಪ್ರಮುಖ ಸಂಗತಿಗಳಿಗೆ ದುಡ್ಡು ಬೇಕಿಲ್ಲ. ನಿದ್ರೆ ಕೂಡ ಮನುಷ್ಯನ ಒಂದು ಸಂಪತ್ತು. ಎಲ್ಲ ಸಂಪತ್ತುಗಳಿದ್ದರೂ, ಅತ್ಯಮೂಲ್ಯವಾದ ನಿದ್ರೆಯ ಸಂಪತ್ತಿನಿಂದ ವಂಚಿತರಾದ ಹಲವರು ನಮಗೆ ಕಾಣ ಸಿಗುತ್ತಾರೆ. ಸರಿಯಾದ ಶಿಕ್ಷಣ ಹಾಗೂ ಭಾಷಾ ಜ್ಞಾನ ಇರುವವರು ಪ್ರಪಂಚದ ಎಲ್ಲಿಯೂ ಕೂಡ ನೆಮ್ಮದಿಯ ಬದುಕನ್ನು ಸಾಧಿಸುತ್ತಾರೆ. ಗುರುಗಳಿಂದ ಸರಿಯಾದ ರೀತಿಯಲ್ಲಿ ಜ್ಞಾನಾರ್ಜನೆ ಪಡೆದುಕೊಳ್ಳುವ ವಿದ್ಯಾರ್ಥಿಗಳು, ವಿದ್ಯೆ ಸಂಪನ್ನರಾಗಿ ಜೀವನವನ್ನು ಜಯಿಸುತ್ತಾರೆ’ ಎಂದರು.

ಬಾಂಡ್ಯಾ ಎಜುಕೇಷನಲ್ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಜಂಟಿ ಕಾರ್ಯ ನಿರ್ವಾಹಣಾ ಟ್ರಸ್ಟಿಗಳಾದ ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್ ಡಿಸಿಲ್ವ ಇದ್ದರು. ಶಿಕ್ಷಕ ತಿಲಕ್ ಮಾತನಾಡಿದರು. ಪುತ್ಥಳಿ ನಿರ್ಮಿಸಿದ ಕಲಾಕಾರ ವೇಣುಗೋಪಾಲ ಆಚಾರ್ಯ ಕಾಸರಗೋಡು ಅವರನ್ನು ಗೌರವಿಸಲಾಯಿತು.

ಅನುಪಮಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಪೂರ್ವಿಕಾ ಪ್ರಾರ್ಥಿಸಿದರು. ಶಿಕ್ಷಣ ಸಂಯೋಜಕಿ ವಿಶಾಲ ಶೆಟ್ಟಿ ನಿರೂಪಿಸಿದರು. ಶಿಕ್ಷಕ ರಾಘವೇಂದ್ರ ಅಮ್ಮುಜೆ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.