ಭಾನುವಾರ, ಡಿಸೆಂಬರ್ 6, 2020
19 °C

ವೀರಶೈವ–ಲಿಂಗಾಯತವನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಲಾಗದು: ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವೀರಶೈವ ಹಾಗೂ ಲಿಂಗಾಯಿತ ಎರಡೂ ಕೂಡ ಹಿಂದು ಧರ್ಮಕ್ಕೆ ಸೇರಿದ್ದು, ಅವು ಪ್ರತ್ಯೇಕ ಅಲ್ಲ. ಸಂಪ್ರದಾಯಗಳಲ್ಲಿ ಕೆಲವೊಂದು ವ್ಯತ್ಯಾಸಗಳಿರಬಹುದೇ ಹೊರತು, ಹಿಂದು ಧರ್ಮದಿಂದ ಅವುಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಪೇಜಾವರ ಮಠದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವವರು ಸೌಹಾರ್ದಯುತ ಚರ್ಚೆಗೆ ಬರಬಹುದು ಎಂದು ಆಹ್ವಾನ ನೀಡಿದರು. ವೀರಶೈವರು ಹಾಗೂ ಲಿಂಗಾಯಿತರು ಹಿಂದೂ ಧರ್ಮಕ್ಕೆ ಸೇರಿದ್ದವರು ಎಂದು ನಾನು ಬಲವಾಗಿ ಪ್ರತಿಪಾದಿಸಿದ್ದೇನೆ. ಇದಕ್ಕೆ ಆಕ್ಷೇಪ ಎತ್ತುವವರು ಉತ್ತರ ಕೊಡಬೇಕು. ಇದನ್ನು ನಾನು ಎಲ್ಲಿ ಬೇಕಾದರೂ ಸಮರ್ಥನೆ ಮಾಡಲು ತಯಾರಾಗಿದ್ದೇನೆ. ಘರ್ಷಣೆಗೆ ಅವಕಾಶ ಇಲ್ಲದ ಶಾಂತ ವಾತಾವರಣದಲ್ಲಿ ಸಂವಾದ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ನಾನು ಹರಿಹರದಲ್ಲಿ ನೀಡಿದ ‘ವೀರಶೈವ ಹಾಗೂ ಲಿಂಗಾಯಿತ ಒಂದೇ. ಅವು ಬೇರೆ ಬೇರೆ ಅಲ್ಲ’ ಎಂಬ ಹೇಳಿಕೆಗೆ ಕೆಲ ಲಿಂಗಾಯಿತ ಸ್ವಾಮೀಜಿಗಳೂ ಬೆಂಬಲ ಕೊಟ್ಟಿದ್ದಾರೆ. ಹಾಗೆಯೇ ವೀರಶೈವ ಸ್ವಾಮೀಜಿಗಳೂ ಬೆಂಬಲ ನೀಡಿದ್ದಾರೆ. ಆದರೆ ಕೆಲವೊಂದು ಮಂದಿ ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವೇಶತೀರ್ಥರು ಬೇರೆ ಮಠದವರು. ಅವರದ್ದು ಬೇರೆ ಸಂಪ್ರದಾಯ. ಇವರೂ ಯಾಕೆ ಇದಕ್ಕೆ ಕೈಹಾಕಿದ್ದು ಎಂದು ಹೇಳಿದ್ದಾರೆ. ಹಾಗೆಯೇ ಸಾಣೆಹಳ್ಳಿ ಮಠಾಧೀಶರು ‘ಪೇಜಾವರ ಶ್ರೀಗಳು ಸರಿಯಾಗಿ ವಿಮರ್ಶೆ ಮಾಡಬೇಕು. ಲಿಂಗಾಯಿತ ಧರ್ಮ ಬೇರೆ. ಅದಕ್ಕೂ ಹಿಂದು ಧರ್ಮಕ್ಕೂ ಸಂಬಂಧವಿಲ್ಲ’ ಎನ್ನುವ ಮೂಲಕ ನನ್ನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದರು.

ನಾನು ಹಿಂದೂ ಧರ್ಮ ದುರ್ಬಲ ಆಗಬಾರದು. ನಾವೆಲ್ಲರೂ ಒಟ್ಟಾಗಿರಬೇಕೆಂಬ ಉದ್ದೇಶದಿಂದ ಸ್ನೇಹ ಸೌಹಾರ್ದಭಾವದಿಂದ ಈ ಹೇಳಿಕೆಯನ್ನು ಕೊಟ್ಟಿದ್ದೇನೆ. ಹಾಗಾಗಿ ನಿಮಗೆ ಏನು ಪ್ರಶ್ನೆ ಮಾಡುವ ಅಧಿಕಾರ ಇದೆ ಎಂದು ಕೇಳುವುದು ಸರಿಯಲ್ಲ. ಎರಡ್ಮೂರು ಸಹೋದರರು ಒಂದೇ ಕೂಡುಕುಟುಂಬದಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಆಗ ಒಬ್ಬ ಸಹೋದರ ಪ್ರತ್ಯೇಕ ಮನೆ ಮಾಡಲು ಹೊರಟಾಗ ಬೇಡವೆಂದು ಹೇಳಿದರೆ ತಪ್ಪಾಗುತ್ತದೆಯೇ? ಎಂದು ಪ್ರಶ್ನಿಸಿದರು.

ವೀರಶೈವ, ಲಿಂಗಾಯಿತ ಹಾಗೂ ಹಿಂದುಗಳು ಸೌಹಾರ್ದವಾಗಿ ಒಟ್ಟಿಗೆ ಬಾಳಬೇಕು ಎಂಬುವುದು ನನ್ನ ಆಶಯ. ಇದರಿಂದ ಕರ್ನಾಟಕದಲ್ಲಿ ಹಿಂದು ಧರ್ಮ ಬಲಿಷ್ಠವಾಗುತ್ತದೆ. ವೀರಶೈವ ಹಾಗೂ ಲಿಂಗಾಯಿತ ಒಂದಾದರೆ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರಿಗೆ ಹೆಚ್ಚು ಬಲ ಬರುತ್ತದೆ. ಒಂದು ವೇಳೆ ಲಿಂಗಾಯಿತ ಬೇರೆ ಆದರೆ ಹಿಂದು ಧರ್ಮಕ್ಕೆ ಬಲ ಕಡಿಮೆಯಾಗುತ್ತದೆ. ನಾನು ಹಿಂದೂ ಹಾಗೂ ಲಿಂಗಾಯಿತ ಸಮಾಜದ ಹಿತದೃಷ್ಟಿಯಿಂದ ಹೇಳಿದ್ದೇನೆ. ಇದನ್ನು ತಪ್ಪಾಗಿ ಪರಿಗಣಿಸಬಾರದು ಎಂದರು. 

ಬ್ರಾಹ್ಮಣರ ಮಠ ಹಾಗೂ ವೀರಶೈವ ಲಿಂಗಾಯಿತ ಮಠಾಧೀಶರ ನಡುವೆ ಅನೇಕ ವರ್ಷಗಳಿಂದ ಅನ್ಯೋನ್ಯತೆಯಿದೆ. ನಾನು ಸಹ 1956ರಿಂದಲೂ ವೀರಶೈವ ಲಿಂಗಾಯಿತ ಮಠಾಧೀಶರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದೇನೆ. ಹಾಗಾಗಿ ಇದೇ ಆತ್ಮೀಯತೆಯಿಂದ ನಾನು ಈ ಹೇಳಿಕೆಯನ್ನು ಕೊಟ್ಟಿದ್ದೇನೆ. ಇದರ ಹಿಂದೆ ನನಗೆ ಯಾವುದೇ ದುರುದ್ದೇಶ ಇಲ್ಲ. ಜಾತಿಭೇದವನ್ನು ಒಪ್ಪದ ಜಾತಿ, ಧರ್ಮಗಳು ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟಿವೆ. ಆದರೆ ಅವು ಪ್ರತ್ಯೇಕ ಗೊಂಡಿಲ್ಲ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು