ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿಗೆ ಕೋವಿಡ್‌ ಮಾತ್ರವಲ್ಲ; ವ್ಯವಸ್ಥೆಯ ವೈಫಲ್ಯವೂ ಕಾರಣ: ವಿನಯ ಕುಮಾರ್ ಸೊರಕೆ

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಟೀಕೆ
Last Updated 11 ಮೇ 2021, 15:08 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ವಿಫಲವಾಗಿದ್ದು, ಸೋಂಕಿತರು ಕೋವಿಡ್‌ನಿಂದ ಮೃತಪಡುತ್ತಿಲ್ಲ. ಬದಲಾಗಿ, ವ್ಯವಸ್ಥೆಯೊಳಗಿನ ಲೋಪದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಟೀಕಿಸಿದರು.

ಸೋಮವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಲಸಿಕೆಯನ್ನು ದೇಶದ ಜನರಿಗೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ನೀಡಲಾಗಲು ಸಾಧ್ಯವಾಗಿಲ್ಲ. ಶೇ 2ರಷ್ಟು ಮಂದಿಗೆ ಮಾತ್ರ ಲಸಿಕೆ ಸಿಕ್ಕಿದೆ. ಇದು ಅವ್ಯವಸ್ಥೆಗೆ ಸಾಕ್ಷಿ ಎಂದು ಕುಟುಕಿದರು.

ಸೋಂಕಿನ ಗಂಭೀರತೆ ಅರಿತು ಆಮ್ಲಜನಕ ಬೆಡ್‌ಗಳ ಸಂಖ್ಯೆ, ವೆಂಟಿಲೇಟರ್‌ಬೆಡ್‌ಗಳ ಸಂಖ್ಯೆ ಹೆಚ್ಚಿಸುವಂತೆ ವಿರೋಧ ಪಕ್ಷ ಸಲಹೆ ನೀಡಿದರೆ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಏಪ್ರಿಲ್‌ವರೆಗೂ ಕೊರೊನಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಕರೆಯಲಿಲ್ಲ. ಹೊರ ರಾಜ್ಯಗಳ ಚುನಾವಣೆ ಹಾಗೂ ಉಪ ಚುನಾವಣೆಯಲ್ಲಿ ತಲ್ಲೀನವಾಗಿದ್ದ ಸರ್ಕಾರ ಕುಂಭಮೇಳ ಆಯೋಜನೆಗೂ ಅನುಮತಿ ನೀಡಿತು.

ದೇಶದ ಬೇಡಿಕೆಯಷ್ಟು ಲಸಿಕೆ ನೀಡಲು ಸಾಧ್ಯವಾಗದೆ, ಆಮ್ಲಜನಕ ಹಾಗೂ ವೆಂಟಿಲೇಟರ್ ಬೆಡ್‍ಗಳನ್ನು ಹೆಚ್ಚಿಸಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತುಕೊಂಡಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಪಕ್ಷದ ಶಾಸಕರೇ ಟೀಕೆ ಮಾಡಿ, ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕೋವಿಡ್‍ನಿಂದ ಸತ್ತವರ ಅಂಕಿ ಅಂಶವಿಲ್ಲ. ಪಾರದರ್ಶಕ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ನಡೆದ ಬೆಡ್ ದಂಧೆ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಒಂದು ಕೋಮಿನ ವಿರುದ್ಧ ಆರೋಪ ಮಾಡಿ ಲೋಪ ಮುಚ್ಚಿಹಾಕುವ ಯತ್ನ ನಡೆಸಿದರು. ದಂಧೆಯಲ್ಲಿ ಬಿಜೆಪಿ ಶಾಸಕರ ಅನುಯಾಯಿಗಳು ಭಾಗಿಯಾಗಿದ್ದಾರೆ ಎಂದು ತಿಳಿದ ಮೇಲೆ ಮಾತನಾಡುತ್ತಿಲ್ಲ. ಕೋವಿಡ್ ನಿರ್ವಹಣಗೆ ತುರ್ತು ಸರ್ವ ಪಕ್ಷದ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ವೆರೊನಿಕಾ ಕರ್ನೆಲಿಯೊ, ವಕ್ತಾರರಾದ ಭಾಸ್ಕರ್ ರಾವ್ ಕಿದಿಯೂರು, ಜನಾರ್ದನ್ ಭಂಡಾರ್ಕರ್, ಹರೀಶ್ ಶೆಟ್ಟಿ ಪಾಂಗಾಳ, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT