ಮಂಗಳವಾರ, ಆಗಸ್ಟ್ 3, 2021
26 °C
ಲಾಕ್‌ಡೌನ್‌ ವೇಳೆ ಕಾಡಿನಲ್ಲಿ ನಾಲ್ಕು ತೊಟ್ಟಿಗಳ ನಿರ್ಮಿಸಿದ ಜಯಕರ ಪೂಜಾರಿ

ಉಡುಪಿ | ಲಾಕ್‌ಡೌನ್ ಅವಧಿಯಲ್ಲಿ ಪ್ರಾಣಿ ಪಕ್ಷಿಗಳ ದಾಹ ತಣಿಸಿದ ಸಹೃದಯಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತು ಕಾಲಹರಣ ಮಾಡದೆ ಕಾಡುಪ್ರಾಣಿಗಳ ದಾಹ ತಣಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ ಶಂಕರ ನಾರಾಯಣದ ಅರೆಕಲ್ಲು ಮನೆಯ ಜಯಕರ ಪೂಜಾರಿ.

ಮೂಲತಃ ಮೇಸ್ತ್ರಿಯಾಗಿರುವ ಜಯಕರ ಪೂಜಾರಿ ದೊಡ್ಡ ಶ್ರೀಮಂತರಲ್ಲ; ಆದರೂ ಪರಿಸರದ ಮೇಲಿನ ಪ್ರೀತಿಯಿಂದಾಗಿ ಕೂಡಿಟ್ಟ ಹಣದಲ್ಲಿ ಶಂಕರ ನಾರಾಯಣ ವಲಯಾರಣ್ಯದಲ್ಲಿ ನಾಲ್ಕು ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಪರಿಣಾಮ, ದಾಹ ತೀರಿಸಿಕೊಳ್ಳಲು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿದ್ದ ಪ್ರಾಣಿಗಳೆಲ್ಲ ಈಗ ಕಾಡಂಚಿನ ತೊಟ್ಟಿಗಳಲ್ಲೇ ಸಿಗುವ ನೀರು ಕುಡಿದು ಮರಳುತ್ತಿವೆ.

‘ವಿಶ್ವ ಪರಿಸರ ದಿನ’ದ ಈ ಹೊತ್ತಿನಲ್ಲಿ ಪರಿಸರ ಕಾಳಜಿಯ ವಿಚಾರ ಮೊಳೆತ ಬಗೆಯನ್ನು ಜಯಕರ ಪೂಜಾರಿ ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಲಾಕ್‌ಡೌನ್ ವೇಳೆ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದಾಗ ಪರಿಸರಕ್ಕೆ ಪೂರಕವಾಗಿ ಒಂದಷ್ಟು ಕೆಲಸ ಮಾಡುವ ಮನಸ್ಸಾಯಿತು. ಈ ವೇಳೆ ಕಾಡಿನಿಂದ ಪ್ರಾಣಿ–ಪಕ್ಷಿಗಳು ನೀರು ಹರಸಿ ರೈತರ ಜಮೀನಿಗೆ ಲಗ್ಗೆ ಇಡುತ್ತಿರುವುದು ಕಣ್ಣಿಗೆ ಬಿತ್ತು. ಆಗಲೇ ಪ್ರಾಣಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುವ ವಿಚಾರ ಹೊಳೆಯಿತು’ ಎಂದು ಯೋಜನೆ ಆರಂಭಗೊಂಡ ಬಗೆಯನ್ನು ತಿಳಿಸಿದರು ಜಯಕರ ಪೂಜಾರಿ.

ಇದೇ ಸಮಯದಲ್ಲಿ ಪರಿಸರ ಪ್ರೇಮಿ ಶಶಿಧರ್ ಶೆಟ್ಟಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಕಾಡಿನಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಡುವಂತೆ ತಿಳಿಸಿದರು. ಅವರ ಬಳಿ ಹೊಸ ಮಾದರಿಯಲ್ಲಿ, ಕಡಿಮೆ ವೆಚ್ಚದಲ್ಲಿ ತೊಟ್ಟಿಗಳನ್ನು ನಿರ್ಮಿಸುವ ವಿಚಾರವನ್ನು ಪ್ರಸ್ತಾಪಿಸಿದೆ. ಅವರೂ ಸಹಕಾರ ನೀಡಿದರು. ತಡಮಾಡದೆ ಕಾಮಗಾರಿ ಆರಂಭಿಸಿದೆ. ನೀರು ಪೋಲಾಗದಂತೆ, ದೀರ್ಘಕಾಲ ಬಾಳಿಕೆಯೂ ಬರುವಂತೆ ತೊಟ್ಟಿಗಳನ್ನು ನಿರ್ಮಾಣ ಮಾಡಿದೆ ಎಂದು ವಿವರಿಸಿದರು.

ತೊಟ್ಟಿಗಳನ್ನು ಕಟ್ಟಲು ಮಕ್ಕಳೂ ಸಹಕಾರ ನೀಡಿದರು. ದೂರದಿಂದ ತಳ್ಳುಗಾಡಿಯಲ್ಲಿ ನೀರು ತಂದು ಕೊಟ್ಟರು. ಈಗ ಪ್ರತಿದಿನ ಜಿಂಕೆ, ಕಾಡುಕೋಣ, ಕಾಡುಹಂದಿ, ಕಾಡು ಕೋಳಿ, ನವಿಲು, ಮಂಗಗಳು ಸಂತೃಪ್ತಿಯಾಗಿ ನೀರು ಕುಡಿದು ಕಾಡಿಗೆ ಮರಳುತ್ತಿವೆ. ಈ ದೃಶ್ಯವನ್ನು ಕಂಡರೆ ಪ್ರಕೃತಿಯ ಅಲ್ಪ ಋಣ ತೀರಿಸಿದ ಸಂತೃಪ್ತ ಭಾವ ಮೂಡುತ್ತದೆ ಎಂದರು ಜಯಕರ ಪೂಜಾರಿ.

‘ಅರಣ್ಯ ಅಧಿಕಾರಿಗಳು ಕೂಡ ನೀರು ಕುಡಿಯಲು ಬರುವ ಪ್ರಾಣಿಗಳ ರಕ್ಷಣೆಗೆ ಅಗತ್ಯ ವ್ಯವಸ್ಥೆ ಮಾಡಿದ್ದಾರೆ. 2 ದಿನಗಳಿಗೊಮ್ಮೆ ನೀರು ತುಂಬಿಸುತ್ತಿದ್ದೇನೆ. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ; ಪ್ರಕೃತಿಯಿಂದ ಪಡೆದ ಸೌಲಭ್ಯಕ್ಕೆ ಪ್ರತಿಯಾಗಿ ಮರಳಿ ಸೇವೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು