ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬದಲಾವಣೆ: ಹೈಕಮಾಂಡ್‌ನಿಂದ ಮಾಹಿತಿ ಬಂದಿಲ್ಲ ಎಂದ ನಳಿನ್ ಕುಮಾರ್ ಕಟೀಲ್

ಪರ್ಕಳದಲ್ಲಿ ಹಡಿಲುಭೂಮಿ ಕೃಷಿ ಆಂದೋಲನದಲ್ಲಿ ನಳಿನ್ ಭಾಗಿ
Last Updated 25 ಜುಲೈ 2021, 9:32 IST
ಅಕ್ಷರ ಗಾತ್ರ

ಉಡುಪಿ: ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೈಕಮಾಂಡ್‌ನಿಂದ ಯಾವುದೇ ಸೂಚನೆಯಾಗಲಿ ಹಾಗೂ ಮಾಹಿತಿಯಾಗಲಿ ಬಂದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಹೇಳಿದರು.

ಭಾನುವಾರ ಪರ್ಕಳದಲ್ಲಿ ಹಡಿಲುಭೂಮಿ ಕೃಷಿ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿ, ‘ಈಚೆಗೆ ಜಾಲತಾಣಗಳಲ್ಲಿ ಹರಿದಾಡಿದ ಆಡಿಯೋ ವಿರುದ್ಧ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಆಡಿಯೋ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದರು.

ಅಹಿಂದ ಮರೆತ ಸಿದ್ದರಾಮಯ್ಯ:ಅಹಿಂದ ಹೋರಾಟದ ಮೂಲಕ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಅಧಿಕಾರ ಸಿಕ್ಕ ಬಳಿಕ ಅಹಿಂದ ಮರೆತರು. ಹಿಂದುಳಿದ ವರ್ಗಗಳ ಉದ್ಧಾರಕ್ಕೆ ಶ್ರಮಿಸಲಿಲ್ಲ. ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ಮುನ್ನಲೆಗೆ ಬಂದಾಗ ಪಕ್ಷಕ್ಕೆ ಹಗಲು ರಾತ್ರಿ ದುಡಿದ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರು. ಈಗ ತಾಕತ್ತಿದ್ದರೆ ಬಿಜೆಪಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲು ಹಾಕಿರುವುದು ಹಾಸ್ಯಾಸ್ಪದ ಎಂದರು.

ವಾಜಪೇಯಿ ಸರ್ಕಾರದಲ್ಲಿ ಮುಸ್ಲಿಂ ವ್ಯಕ್ತಿ ರಾಷ್ಟ್ರಪತಿಯಾಗಿದ್ದರು. ಮೋದಿ ಆಡಳಿತದಲ್ಲಿ ದಲಿತರಾದ ರಾಮನಾಥ ಕೋವಿಂದರನ್ನು ರಾಷ್ಟ್ರಪತಿ ಮಾಡಲಾಗಿದೆ. ನಾರಾಯಣಸ್ವಾಮಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗಿದೆ. ಕೇಂದ್ರದಲ್ಲಿ ಶೇ 30ರಷ್ಟು ಸಚಿವರು ಎಸ್‌ಸಿ ಹಾಗೂ ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಇದು ಬಿಜೆಪಿ ಕೊಡುಗೆಯಾಗಿದ್ದು, ಕಾಂಗ್ರೆಸ್‌ ಕೊಡುಗೆ ಏನು ಎಂದು ಸ್ಪಷ್ಟಪಡಿಸಬೇಕು ಎಂದು ನಳಿನ್ ಸವಾಲು ಹಾಕಿದರು.

ಸತ್ಯಾಸತ್ಯತೆ ಪರಿಶೀಲನೆ:ಮೊಟ್ಟೆ ಟೆಂಡರ್‌ ಅವ್ಯವಹಾರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ನಳಿನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT