ಉಡುಪಿ: ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ಸ್ಥಾಪಿಸಿದ್ದ ಪರಶುರಾಮ ಮೂರ್ತಿಯ ಸೊಂಟದ ಮೇಲಿನ ಭಾಗ ಎಲ್ಲಿದೆ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯಕುಮಾರ್ ಮುನಿಯಾಲು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜಿಲ್ಲಾಧಿಕಾರಿ ಈ ಬಗ್ಗೆ ಮುತುವರ್ಜಿ ವಹಿಸಿ ಮೂರ್ತಿಯ ಅರ್ಧಭಾಗ ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.
ಪರಶುರಾಮ ಥೀಂ ಪಾರ್ಕ್ ಸ್ಥಾಪಿಸುವುದರ ಹಿಂದೆ ಬೈಲೂರಿಗೆ ಹೊಸ ಕಳೆ ತರುವ ಉದ್ದೇಶವಿರಲಿಲ್ಲ ಎಂಬುದು ಈಗ ತಿಳಿಯುತ್ತಿದೆ ಎಂದರು.
ಮುಖ್ಯಮಂತ್ರಿಯನ್ನು ಕರೆದು ನಕಲಿ ಮೂರ್ತಿಯನ್ನು ಉದ್ಘಾಟನೆ ಮಾಡಿಸಿರುವುದು ಇಡೀ ಜಿಲ್ಲೆಗೆ ಮಾಡಿದ ಅವಮಾನ. ಈಗಾಗಲೇ ಬೆಟ್ಟದ ಮೇಲೆ ಪರಶುರಾಮ ಮೂರ್ತಿಯ ಎರಡು ಕಾಲುಗಳಿವೆ. ಕಾರ್ಕಳ ಪೊಲೀಸರು ಜಪ್ತಿ ಮಾಡಿರುವುದರಲ್ಲೂ ಎರಡು ಕಾಲುಗಳಿವೆ. ನಾಲ್ಕು ಕಾಲುಗಳು ಯಾಕೆ ಎಂದೂ ಅವರು ಪ್ರಶ್ನಿಸಿದರು.
ಪೊಲೀಸರಿಗೆ ಮೂರ್ತಿಯ ಎರಡು ಕಾಲುಗಳು ಸಿಕ್ಕಿರುವುದರಿಂದ ಬೆಟ್ಟದ ಮೇಲಿರುವ ಮೂರ್ತಿಯ ಕಾಲುಗಳು ನಕಲಿ ಎಂಬುದು ಸಾಬೀತಾಗಿದೆ ಎಂದೂ ಅವರು ಹೇಳಿದರು.
ಒಂದು ವೇಳೆ ನಕಲಿ ಮೂರ್ತಿ ಮುರಿದು ಬಿದ್ದು, ಪ್ರವಾಸಿಗರಿಗೆ ಏನಾದರೂ ಅನಾಹುತವಾಗಿದ್ದರೆ ಯಾರು ಹೊಣೆ ಎಂದೂ ಪ್ರಶ್ನಿಸಿದ್ದಾರೆ.
2022ರಲ್ಲಿ ನಿರ್ಮಿತಿ ಕೇಂದ್ರದಿಂದ ಶಿಲ್ಪಿ ಕೃಷ್ಣ ನಾಯಕ್ ಅವರಿಗೆ ₹1 ಕೋಟಿ ನೀಡಲಾಗಿದೆ. ಈ ಹಣದಿಂದ ಅವರು ಕಂಚು ತಂದಿಲ್ಲ. ಜಿಎಸ್‌ಟಿಯನ್ನೂ ಕಟ್ಟಿಲ್ಲ. ಈ ಮೂಲಕ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ₹1 ಕೋಟಿ ಪಡೆದಿರುವ ಕೃಷ್ಣ ನಾಯಕ್ ಅವರು, ತಾವು ಬಡ ಶಿಲ್ಪಿ ಎನ್ನುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದೀಪಕ್ ಕೋಟ್ಯಾನ್, ಸುಭೀತ್ ಕುಮಾರ್, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್ ಇದ್ದರು.