ಶನಿವಾರ, ಜೂನ್ 25, 2022
27 °C
ಮುದ್ರಾಡಿ

ವಿದ್ಯಾರ್ಥಿಗಳಿಗೆ ವೈಫೈ ವ್ಯವಸ್ಥೆ: ಪಂಚಾಯಿತಿ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳ ಆನ್‌ಲೈನ್‌ ಶಿಕ್ಷಣ ಮತ್ತು  ಮನೆಯಿಂದ ಕೆಲಸ (ವರ್ಕ್‌ ಫ್ರಂ ಹೋಂ) ಮಾಡುವವರಿಗೆ ನೆಟ್‌ವರ್ಕ್‌ ಸಮಸ್ಯೆ ಉಂಟಾಗಿತ್ತು. ಪರಿಣಾಮ ರಸ್ತೆ ಬದಿ, ಕಾಡು ಗುಡ್ಡೆಗಳಲ್ಲಿ ನೆಟ್‌ವರ್ಕ್‌ ಹುಡುಕುವ ಪರಿಸ್ಥಿತಿ ಇತ್ತು. ಎರಡು ತಿಂಗಳಿನಿಂದ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಹೈರಾಣ ಆಗಿದ್ದರು.

ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ಆಡಳಿತ ಅಧ್ಯಕ್ಷ ದಿನೇಶ ಹೆಗ್ಡೆ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವೈಫೈ ಅಳವಡಿಸಿ ವಿದ್ಯಾರ್ಥಿಗಳು ಮತ್ತು ಮನೆಯಿಂದ ಕೆಲಸ ಮಾಡುವವರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟಿದ್ದು, ಎಲ್ಲರ ಮೆಚ್ಚುಗೆ ಕಾರಣವಾಗಿದೆ.

ಈಚೆಗೆ ಕೋವಿಡ್‌ ಕರ್ತವ್ಯದ ಮೇಲೆ ನಾಡ್ಪಾಲಿಗೆ ತೆರಳುತ್ತಿದ್ದಾಗ ಅರಣ್ಯದ ಪಕ್ಕದ ರಸ್ತೆ ಬದಿಯಲ್ಲಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ನಾಡ್ಪಾಲಿನ ಯುವತಿ ರಸ್ತೆಯ ಬದಿಯಲ್ಲಿ ಲ್ಯಾಪ್‌ ಹಿಡಿದುಕೊಂಡು ಕರ್ತವ್ಯ ಮಾಡುತ್ತಿ ರುವ ಬಗ್ಗೆ ಹೆಬ್ರಿ ತಹಶೀಲ್ದಾರ್‌ ಗಮನಕ್ಕೆ ಬಂದು ಯುವತಿಯನ್ನು ವಿಚಾರಿಸಿ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ವನ್ನು ಒದಗಿಸುವ ಭರವಸೆ ನೀಡಿದ್ದರು.

ಒಂದೆರಡು ದಿನದಲ್ಲಿ ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲಿ ವೈಫೈ ಅಳವಡಿಸುವ ಮೂಲಕ ಸ್ಥಳೀಯರ ಸಮಸ್ಯೆಗೆ ಪರಿಹಾರ ದೊರೆತಿದ್ದು, ಪಂಚಾಯಿತಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೊ ಸಂವಾದ ಸಭೆಯನ್ನು ಕೂಡ ಇಲ್ಲೇ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ವೈಫೈ ಸೇವೆಯಿಂದ ಹಲವರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಕ್ಷ ದಿನೇಶ ಹೆಗ್ಡೆ ತಿಳಿಸಿದ್ದಾರೆ.

ಡಿಸಿ ಮೆಚ್ಚುಗೆ: ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಂಡು ವಿಚಾರಿಸಿ ಮೇಲಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದ ಹೆಬ್ರಿ ತಹಶೀಲ್ದಾರ್‌ ಪುರಂದರ್‌ ಕಾರ್ಯಕ್ಕೂ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುದ್ರಾಡಿ ಗ್ರಾಮ ಪಂಚಾಯಿತಿ ಯಲ್ಲೂ ವೈಫೈ ವ್ಯವಸ್ಥೆ: ಮುದ್ರಾಡಿ ಮತ್ತು ಕಬ್ಬಿನಾಲೆ ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಆನ್‌ಲೈನ್‌ ತರಗತಿಗಳಿಗೆ ಇಂಟರ್‌ನೆಟ್‌ ಸಮಸ್ಯೆ ಕಂಡು ಬಂದಿದ್ದು, ಮುದ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ವೈಫೈ ವ್ಯವಸ್ಥೆ ಮಾಡಿದ್ದು ವಿದ್ಯಾರ್ಥಿಗಳು ಕೋವಿಡ್‌ ನಿಯಮ ಪಾಲಿಸಿ ಉಚಿತ ವೈಫೈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಗ್ರಾಮ ಪಂಚಾಯಿತಿ ತಿಳಿಸಿದೆ.

‌ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್‌ವರ್ಕ್‌ ಇಂಟರ್‌ನೆಟ್‌ ಸಮಸ್ಯೆ ಇಲ್ಲದೆ ಕಳೆದ ಹಲವು ವರ್ಷಗಳಿಂದ ಭಾರಿ ಸಮಸ್ಯೆಯಾಗುತ್ತಿದೆ. ಕೋವಿಡ್‌ ಮಹಾಮಾರಿ ಬಂದ ಬಳಿಕ ಎಲ್ಲರಿಗೂ ಮತ್ತಷ್ಟು ಸಮಸ್ಯೆಯಾಗಿದೆ. ಈಗ ಗ್ರಾಮ ಪಂಚಾಯಿತಿಯಲ್ಲಿ ವೈಫೈ ಅಳವಡಿಸಿ ವಿದ್ಯಾರ್ಥಿಗಳು ಮತ್ತು ಮನೆಯಿಂದ ಕೆಲಸ ಮಾಡುವವರಿಗೆ ಅನುಕೂಲ ಮಾಡಿಕೊಡಲಾಗಿದೆ. ನಾಡ್ಪಾಲಿನ ನೆಟ್‌ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ವಿಶೇಷ ಪ್ರಯತ್ನಗಳು ನಡೆಯುತ್ತಿವೆ ಎಂದು ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಹೆಗ್ಡೆ ಹೇಳಿದರು.

‘ಸಮಸ್ಯೆ ಕಂಡು ನೋವಾಗಿತ್ತು’

ಇಂಟರ್‌ನೆಟ್‌ ಸಮಸ್ಯೆ ಕಂಡು ಅತ್ಯಂತ ನೋವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗುತ್ತಿದೆ. ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲೂ ಹಲವರು ಇಂಟರ್‌ ನೆಟ್‌ ಗಂಭೀರ ಸಮಸ್ಯೆ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ಸಭೆ ನಡೆಸಿ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರಕ್ಕೆ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮಕೈಗೊಳ್ಳಲಾಗುವುದು. ಹೆಬ್ರಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದೆ ಎಂದು ತಹಶೀಲ್ದಾರ್‌ ಪುರಂದರ್‌ ಕೆ. ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು