ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಿದಾರ್ ಶಬ್ಧವೇ ಬಿಜೆಪಿ ಬಂಡವಾಳ

ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಟೀಕೆ
Last Updated 10 ಏಪ್ರಿಲ್ 2019, 17:07 IST
ಅಕ್ಷರ ಗಾತ್ರ

ಉಡುಪಿ:ಮೋದಿ ಭಾಷಣದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರಗಳಿಗೆ ಗೆಲುವು ಸಿಗಲಿದೆಯೇ ಅಥವಾ ಭಾವನಾತ್ಮಕ ವಿಚಾರಗಳಿಗೆ ಗೆಲುವು ಸಿಗಲಿದೆಯೋ ಎಂಬುದು ನಿರ್ಧಾರ ವಾಗಲಿದೆ ಎಂದು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ಜಾತಿವಾದಿಗಳನ್ನು ದೂರವಿಡಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ 2 ಪಕ್ಷಗಳು ಒಟ್ಟಾಗಿವೆ. 5 ವರ್ಷಗಳ ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿದ್ದು, ಸಂವಿಧಾನಕ್ಕೆ ಧಕ್ಕೆಯಾಗುವ ಲಕ್ಷಣಗಳು ಕಾಣುತ್ತಿವೆ. ಹಾಗಾಗಿ ದೇಶದೆಲ್ಲೆಡೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. 20ಕ್ಕೂ ಹೆಚ್ಚು ಪಕ್ಷಗಳು ಬಿಜೆಪಿ ವಿರುದ್ಧ ಸಮರ ಸಾರಿವೆ ಎಂದರು.

ಭಾವನಾತ್ಮಕ ವಿಚಾರಗಳಿಂದ ಜನರ ಮನಸ್ಸನ್ನು ಸೆಳೆಯಲು ಯತ್ನಿಸಿದರೂ ಅಭಿವೃದ್ಧಿ ವಿಚಾರಗಳೇ ಗೆಲವಿಗೆ ಮುಖ್ಯವಾಗಲಿದೆ. ಬಿಜೆಪಿಗೆ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. 21 ಕಾಂಗ್ರೆಸ್‌, ಜೆಡಿಎಸ್‌ನ 7 ಅಭ್ಯರ್ಥಿಗಳು ಇದ್ದಾರೆ. ಎರಡೂ ಪಕ್ಷಗಳ ನಾಯಕರು, ಕಾರ್ಯರ್ತರು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

‘ಮೀನುಗಾರರ ಸುಳಿವಿಲ್ಲ’:ಮಲ್ಪೆಯಿಂದ ನಾಪತ್ತೆಯಾದ ಮೀನುಗಾರರ ಪತ್ತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ನಡೆಸಿದೆ. ಆದರೆ, ಸುಳಿವು ಮಾತ್ರ ಸಿಕ್ಕಿಲ್ಲ. ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಚುನಾವಣೆ ಬಳಿಕಇಸ್ರೋ ನೆರವಿನೊಂದಿಗೆ ಎನ್‌ಎಂಆರ್ ಉಪಕರಣಗಳನ್ನು ತಯಾರಿಸಿ, ಎಲ್ಲ ಡೀಪ್‌ಸೀ ಬೋಟ್‌ಗಳಿಗೆ ಅಳವಡಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ನಿಲ್ಲಿಸಿದ ಮೇಲೆ ತೀವ್ರ ಸಮಸ್ಯೆಯಾಗಿತ್ತು. ಅದನ್ನು ಮನಗಂಡ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ. ಡೀಸೆಲ್‌ಗೆ ₹ 146 ಕೋಟಿ ಹಾಗೂ 19.5 ಕೋಟಿ ಸೀಮೆಎಣ್ಣೆಗೆ ಸಬ್ಸಿಡಿ ಕೊಡಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಭೇಟಿ ನೀಡಲಿಲ್ಲ ಎಂದು ಬಿಜೆಪಿ ಟೀಕಿಸುತ್ತದೆ. ಆದರೆ, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಪ್ರತಿನಿಧಿಸುವ ಉತ್ತರ ಕನ್ನಡದಿಂದ 5 ಜನ ಮೀನುಗಾರರು ನಾಪತ್ತೆಯಾಗಿದ್ದಾರೆ. ಅವರು ಎಷ್ಟು ಜನರ ಮನೆಗೆ ಭೇಟಿ ನೀಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ವಾಗ್ದಾಳಿ ನಡೆಸಿದರು.

ಮೀನುಗಾರರ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿದರೂ, ನೀಡದಿದ್ದರೂ ಬಿಜೆಪಿ ಟೀಕಿಸುತ್ತದೆ. ಈಗಾಗಲೇ ಸರ್ಕಾರದ ಪ್ರತಿನಿಧಿಗಳು ಭೇಟಿನೀಡಿದ್ದೇವೆ. ಚುನಾವಣೆ ಸಂದರ್ಭ ಮುಖ್ಯಮಂತ್ರಿ ಭೇಟಿನೀಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಈ ಸಂದರ್ಭ ಮುಖಂಡರಾದ ಯು.ಎ.ಸಭಾಪತಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT