ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕಾಗಿ ಸಿದ್ಧವಾದ ಜಗತ್ತು: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌

ಬಿಜೆಪಿ ಪ್ರಬುದ್ದರ ಸಮಾವೇಶದಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌
Last Updated 19 ಮಾರ್ಚ್ 2023, 16:10 IST
ಅಕ್ಷರ ಗಾತ್ರ

ಉಡುಪಿ: ವಿಶ್ವದ ಪ್ರಭಾವಿ ನಾಯಕರು ಭಾರತದತ್ತ ಮುಖ ಮಾಡಬೇಕು, ಭಾರತಕ್ಕಾಗಿ ಇಡೀ ಜಗತ್ತು ಸಿದ್ಧವಿದೆ ಎಂಬ ಸ್ಪಷ್ಟ ಸಂದೇಶ ರವಾನೆಯಾಗಬೇಕು ಎಂಬ ಉದ್ದೇಶದಿದ ಭಾರತ ಜಿ 20 ಆತಿಥ್ಯ ವಹಿಸಿಕೊಂಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಹೇಳಿದರು.

ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಭಾನುವಾರ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿ, ಜಿ–20 ಸಮಾವೇಶ ದೇಶದ ಕಲೆ, ಸಂಸ್ಕೃತಿ, ಆತಿಥ್ಯವನ್ನು ವಿಶ್ವಕ್ಕೆ ಪರಿಚಯಿಸಲಿದೆ. ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಭಾರತ ಸನ್ನದ್ಧವಾಗಿದೆ ಎಂಬುದನ್ನು ತಿಳಿಸಲಿದೆ ಎಂದರು.

ಒಂದು ದಶಕದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಬೆಳೆದು ನಿಂತಿದೆ. ಜಾಗತಿ ಮಟ್ಟದಲ್ಲಿ ದೇಶದ ಘನತೆ, ಸ್ಥಾನಮಾನ ಹೆಚ್ಚಾಗಿದ್ದು ವಿಶ್ವ ಮನ್ನಣೆ ದೊರೆಯುತ್ತಿದೆ ಎಂದರು.

ಕೋವಿಡ್ ಕಾಲಘಟ್ಟ ಸವಾಲುಗಳನ್ನು ಎದುರಿಸಿ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಕಲಿಸಿಕೊಟ್ಟಿದೆ. ಕೋವಿಡ್‌ನಿಂದ ವಿಶ್ವದ ಆರ್ಥಿಕತೆ ಕಠಿಣ ಸ್ಥಿತಿ ತಲುಪಿದ್ದು ಮೂರನೇ ಒಂದು ಭಾಗದಷ್ಟು ರಾಷ್ಟ್ರಗಳ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿಶ್ವದ ಪೂರೈಕೆ ಜಾಲ ಏರುಪೇರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ದೇಶದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ ಎಂದರು.

ಕೋವಿಡ್‌ ಲಾಕ್‌ಡ್‌ನ್ ಸಂದರ್ಭ ಎದುರಾದಾಗ ವಂದೇ ಭಾರತ್ ಮಿಷನ್ ಕಾರ್ಯಕ್ರಮದಡಿ ವಿದೇಶಗಳಲ್ಲಿ ಸಿಲುಕಿದ್ದ ಲಕ್ಷಾಂತರ ಭಾರತೀಯ ಪ್ರಜೆಗಳನ್ನು ಕರೆಸಿಕೊಳ್ಳಲಾಯಿತು. ಉಕ್ರೇನ್ ರಷ್ಯಾ ಯುದ್ಧದ ಸಂದರ್ಭದಲ್ಲಿ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಲಾಯಿತು. ಪ್ರಧಾನಿ ಮೋದಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು ವಿಶ್ವ ನಾಯಕರ ಮನ್ನಣೆ ಪಡೆದವು ಎಂದರು.

ಜನಧನ್, ಮುದ್ರಾ, ಪ್ರಧಾನಮಂತ್ರಿ ಆವಾಸ್ ಯೋಜನೆ, ಸಾಮಾಜಿಕ ಭದ್ರತಾ ಯೋಜನೆಗಳಡಿ ಕೋಟ್ಯಂತರ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯ ಹಾಗೂ ಸಹಾಯಧನವನ್ನು ತಲುಪಿಸಲು ಡಿಜಿಟಲ್ ಇಂಡಿಯಾ ಕಾರ್ಯಕ್ರಮ ನೆರವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾರ್ವಭೌಮತ್ವ ಸಾಧಿಸಿದರೆ ಜಾಗತಿಕ ಮಟ್ಟದಲ್ಲಿ ನಾಯಕತ್ವದ ಹೆಜ್ಜೆಗುರುತುಗಳನ್ನು ಮೂಡಿಸಬಹುದಾಗಿದ್ದು ಇದೇ ಹಾದಿಯಲ್ಲಿ ಭಾರತ ಸಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಮುಖಂಡ ಮಟ್ಟಾರು ರತ್ನಾಕರ ಹೆಗಡೆ ವೇದಿಕೆಯಲ್ಲಿದ್ದರು.

‘ದಿಟ್ಟ ನಿರ್ಧಾರ ತೆಗೆದುಕೊಂಡ ಮೋದಿ’

ಉಕ್ರೇನ್–ರಷ್ಯಾ ಯುದ್ಧದ ಪರಿಣಾಮ ತೈಲ ಪೂರೈಕೆ ಜಾಲಕ್ಕೆ ಪೆಟ್ಟು ಬಿದ್ದು ಕಚ್ಚಾತೈಲ ಬೆಲೆ ಹೆಚ್ಚಳವಾಯಿತು, ಆಹಾರ ವಸ್ತುಗಳ, ರಸಗೊಬ್ಬರ ಕೊರತೆಯಿಂದ ವಿಶ್ವವೇ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿತು. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ವಿರೋಧಗಳನ್ನು ಲೆಕ್ಕಿಸದೆ ದೇಶದ ನಾಗರಿಕರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ರಷ್ಯಾದಿಂದ ತೈಲ ಹಾಗೂ ರಸಗೊಬ್ಬರ ಪೂರೈಕೆ ಸ್ಥಗಿತವಾಗದಂತೆ ನೋಡಿಕೊಂಡರು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT