ಸೋಮವಾರ, ಮೇ 23, 2022
22 °C

‘ಯುವ ಸ್ಪಂದನದ ಮೂಲಕ ಸದೃಢ ಸಮಾಜ ನಿರ್ಮಾಣವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನಗರಗಳ ಶಾಲಾ ಕಾಲೇಜುಗಳು ಮಾತ್ರವಲ್ಲ, ಗ್ರಾಮಮಟ್ಟದ ಶಾಲಾ ಕಾಲೇಜು, ವಿದ್ಯಾರ್ಥಿ ವಸತಿ ನಿಲಯ, ಸಂಘ ಸಂಸ್ಥೆಗಳ ಯುವ ಜನಾಂಗಕ್ಕೆ ಯುವ ಸ್ಪಂದನ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಯುವಸ್ಪಂದನ ಕಾರ್ಯಕ್ರಮದ ಸಲಹಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲಕರ ವೃತ್ತಿಪರ ಮಾರ್ಗದರ್ಶನದ ವಿವರಗಳನ್ನೊಳಗೊಂಡ ಭಿತ್ತಿಪತ್ರಗಳನ್ನು ಶಾಲಾ ಕಾಲೇಜು, ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಹಾಕಬೇಕು. ನೆಹರೂ ಯುವ ಕೇಂದ್ರ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಕಾರೇತರ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮ ಮಾಡಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ಯುವ ಸ್ಪಂದನ ಕೇಂದ್ರವು ಎಲ್ಲ ಜಿಲ್ಲೆಗಳಲ್ಲಿ 2014ರಿಂದ ಅನುಷ್ಠಾನಗೊಂಡಿದೆ. ಯುವ ಜನಾಂಗದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಯುವ ಜನರಿಗೆ ಭಾವನಾತ್ಮಕ, ಮಾನಸಿಕ ಮತ್ತು ಮನೋ ಸಾಮಾಜಿಕ ಬೆಂಬ ನೀಡುವ ಕೆಲಸವನ್ನು ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದರು.

ಯುವ ಸ್ಪಂದನ ಕೇಂದ್ರದ ಕ್ಷೇತ್ರ ಸಂಪರ್ಕಾಧಿಕಾರಿ ಸುಜನ್ ಮಾತನಾಡಿ, 15 ರಿಂದ 35 ವರ್ಷದೊಳಗಿನ ಯುವ ಜನರಿಗೆ ಆರೋಗ್ಯ ಮತ್ತು ಜೀವನ ಶೈಲಿ, ಶಿಕ್ಷಣ ಮತ್ತು ವೃತ್ತಿ ವಿಷಯಗಳು, ಸಂಬಂಧಗಳು, ವ್ಯಕ್ತಿತ್ವ ಬೆಳವಣಿಗೆ, ಸುರಕ್ಷತೆ, ಲಿಂಗ ಮತ್ತು ಲೈಂಗಿಕತೆ ವಿಷಯಗಳ ಕುರಿತು ಇರುವ ಗೊಂದಲ ಮತ್ತು ಸವಾಲುಗಳಿಗೆ ಮಾರ್ಗದರ್ಶನ ಸಿಗಬೇಕು. ಆಪ್ತ ಸಮಾಲೋಚನೆ ಮೂಲಕ ಯುವ ಜನತೆಯನ್ನು ಸದೃಢಗೊಳಿಸುವ ಕಾರ್ಯಕ್ರಮಕ್ಕೆ ಸಹಕಾರ ಅಗತ್ಯವಿದೆ ಎಂದರು.

2014ರಿಂದ ಇದುವರೆಗೆ ಉಡುಪಿ ಜಿಲ್ಲೆಯಲ್ಲಿ 436 ಸಂಪನ್ಮೂಲ ಕ್ರೋಢೀಕರಣ, 829 ಅರಿವು ಕಾರ್ಯಕ್ರಮಗಳು ನಡೆದಿದ್ದು, 5,552 ಯುವಕರು ಮತ್ತು 6,802 ಯುವತಿಯರು ಭಾಗವಹಿಸಿದ್ದಾರೆ. 401 ಮಂದಿ ಮಾರ್ಗದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಆರ್.ಫಡ್ನೇಕರ್, ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ, ಎನ್.ಜಿ. ಚರಣ್, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್‌ ಡಿಸೋಜ, ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ, ಯುವ ಸ್ಪಂದನ ಕೇಂದ್ರದ ಯುವ ಸಮಾಲೋಚಕಿ ಶ್ಯಾಮಲಾ ಕಿರಣ್, ಯುವ ಪರಿವರ್ತಕ ನರಸಿಂಹ ಗಾಣಿಗ, ಚೇತನ್ ಕುಮಾರ್, ಪಾರ್ಥಸಾರಥಿ ಕುಂಜಾರುಗಿರಿ, ಜ್ಯೋತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು