ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಿ

ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಸೂಚನೆ
Last Updated 12 ಫೆಬ್ರುವರಿ 2020, 9:42 IST
ಅಕ್ಷರ ಗಾತ್ರ

ಉಡುಪಿ: ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗಿದೆ. ಉಡುಪಿ ತಾಲ್ಲೂಕು ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಹಿನ್ನಡೆಯಾಗಿದ್ದು, ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಗ್ರಾಮೀಣ ನೈರ್ಮಲ್ಯಕ್ಕಾಗಿ ಆದ್ಯತೆ ಸಿಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ಬಳಕೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಸಿಂಗಲ್ ಪಿಟ್ ಟಾಯ್ಲೆಟ್‍ನಿಂದ ಆರೋಗ್ಯ ಸಮಸ್ಯೆಗಳಾಗುವ ದೂರುಗಳಿದ್ದು, ಮುಂದೆ ಡಬಲ್ ಪಿಟ್ ಟಾಯ್ಲೆಟ್‍ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ಹೊಸ ಮನೆಗಳನ್ನು ನಿರ್ಮಾಣ ಮಾಡುವಾಗ ಡಬಲ್ ಪಿಟ್ ಟಾಯ್ಲೆಟ್‌ ನಿರ್ಮಿಸಿಕೊಳ್ಳುವ ಷರತ್ತು ಹಾಕಿ. ಡೋರ್ ನಂಬರ್ ಕೊಡುವಾಗ ಖಾತ್ರಿ ಪಡಿಸಿಕೊಳ್ಳಿ. ಜನರಿಗೆ ಡಬಲ್ ಪಿಟ್ ಟ್ಲಾಯ್ಲೆಟ್‌ಗಳ ಅನುಕೂಲಗಳ ಬಗ್ಗೆ ಅರಿವು ಮೂಡಿಸಿ ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‍ರಾವ್ ತಿಳಿಸಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಲ್ಲ ತಾಲ್ಲೂಕುಗಳಲ್ಲಿ ಪ್ರೇರಣಾ ಶಿಬಿರಗಳನ್ನು ಆರಂಭಿಸಲಾಗಿದ್ದು, ಇಂತಹ ಶಿಬಿರಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಸಭೆಗೆ ಡಿಡಿಪಿಐ ಶೇಷಶಯನ ಕಾರಿಂಜ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಲೇರಿಯಾ 6, ಚಿಕನ್‍ಗುನ್ಯಾ 5 ಪ್ರಕರಣಗಳು ಕಂಡುಬಂದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ರೋಗ ನಿಯಂತ್ರಣಕ್ಕೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯಡಿ ಹಣ್ಣು ಸಸಿಗಳ ವಿತರಣೆ ಶೇ 90ರಷ್ಟು ಆಗಿದ್ದು, 150 ಹೆಕ್ಟೇರ್ ಅಭಿವೃದ್ದಿ ಆಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕುಂದಾಪುರ ತಾಲೂಕಿನ ಹೆಮ್ಮಾಡಿ ಸುತ್ತಮುತ್ತ ರೈತರು ಹೆಚ್ಚಾಗಿ ಸೇವಂತಿಗೆ ಬೆಳೆಯುತ್ತಿದ್ದು, ಈ ವರ್ಷ ಇಳುವರಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಪರಿಹಾರ ನೀಡಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್ ಆಗ್ರಹಿಸಿದರು.

ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಳಕೆಯ ಶುಲ್ಕವನ್ನು ಬಾಕಿ ಇರಿಸಿಕೊಂಡಿವೆ. ಕೂಡಲೇ ಮೆಸ್ಕಾಂಗೆ ಬಾಕಿ ಪಾವತಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್‌, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಯೋಜನಾ ನಿರ್ದೇಶಕ ಗುರುದತ್ತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT