ಬುಧವಾರ, ಜನವರಿ 22, 2020
27 °C
ಜಿಲ್ಲೆಯ ರೋಗಿಗಳು ಹೊರ ಜಿಲ್ಲೆಗೆ ಹೋಗುವುದನ್ನು ತಪ್ಪಿಸಲು ಕ್ರಮ: ಅಶ್ವತ್ಥನಾರಾಯಣ

ಒಂದೇ ಜಾಲದಲ್ಲಿ ಸರ್ಕಾರಿ ಆಸ್ಪತ್ರೆಗಳ ಜೋಡಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಉತ್ತರಕನ್ನಡದ ರೋಗಿಗಳು ಹೊರ ಜಿಲ್ಲೆ, ರಾಜ್ಯಗಳಲ್ಲಿ ಚಿಕಿತ್ಸೆ ಪಡೆಯುವ ಪ್ರಮೇಯವನ್ನು ತಪ್ಪಿಸಲು ಯೋಜನೆ ರೂಪಿಸಲಾಗುವುದು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳನ್ನು ವ್ಯವಸ್ಥಿತವಾದ ಜಾಲದಡಿ (ನೆಟ್‌ವರ್ಕ್) ತರಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿದ ಅವರು, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

‘ಎಲ್ಲ ಆಸ್ಪತ್ರೆಗಳನ್ನು ಒಂದುಗೂಡಿಸಿ ಯಾವ ಕಾಯಿಲೆಗೆ ಎಲ್ಲಿಗೆ ಹೋಗಬೇಕು ಎಂಬ ಮಾಹಿತಿ ನೀಡಲಾಗುತ್ತದೆ. ಇದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನೀಡಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು. 

‘ವೈದ್ಯಕೀಯ ಕಾಲೇಜಿನ ಗುಣಮಟ್ಟ ಮತ್ತಷ್ಟು ಹೆಚ್ಚಬೇಕು. ಜೊತೆಗೇ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ₹ 150 ಕೋಟಿಯನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆಗಳೂ ಮುಗಿದಿವೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಹೊಸ ಕಟ್ಟಡಗಳಿಗೆ ಅಗತ್ಯವಿರುವ ಸ್ಥಳದ ಸಮಸ್ಯೆ ಬಗೆಹರಿಸಲು ಚಿಂತಿಸಲಾಗುವುದು’ ಎಂದು ತಿಳಿಸಿದರು.

‘ಆಸ್ಪತ್ರೆಯ ಆಡಳಿತದ ಹುದ್ದೆಗಳಲ್ಲಿ ಇರುವವರು ಖಾಸಗಿಯಾಗಿ ಕ್ಲಿನಿಕ್‌ಗಳನ್ನು ತೆರೆಯುವುದು ಬೇಡ. ವೈದ್ಯಕೀಯ ಕಾಲೇಜಿನ ಅಭಿವೃದ್ಧಿಗೆ ಸಮಯ ನೀಡಿದಷ್ಟೂ ಸಾಕಾಗುವುದಿಲ್ಲ. ಇದರ ಉನ್ನತಿ ಆಗದಿದ್ದರೆ ಸುಮಾರು ₹ 800 ಕೋಟಿ ವ್ಯಯಿಸಿದ ಉದ್ದೇಶವೇ ಈಡೇರುವುದಿಲ್ಲ. ಆದ್ದರಿಂದ ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ವೈದ್ಯಕೀಯ ಕಾಲೇಜಿನ ಜೊತೆಗೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವುದು ನಮ್ಮ ಕನಸಾಗಿದೆ. ಇದಕ್ಕೆ ಮತ್ತಷ್ಟು ವೈದ್ಯರ ಅಗತ್ಯವಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಸೇವೆ ಮಾಡಬೇಕು. ವೈದ್ಯರನ್ನೂ ದೇವರಂತೆ ಕಾಣುವ ಸಮಾಜ ನಮ್ಮದು‌’ ಎಂದು ಹೇಳಿದರು.

ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ.ಶಿವಾನಂದ ದೊಡ್ಮನಿ ಸ್ವಾಗತಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್ ವಂದಿಸಿದರು. ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ವೇದಿಕೆಯಲ್ಲಿದ್ದರು.

ಇದಕ್ಕೂ ಮೊದಲು ಅಶ್ವತ್ಥ ನಾರಾಯಣ ಅವರು, ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದರು. ಪ್ರಭಾರ ಪ್ರಾಂಶುಪಾಲ ನಿತ್ಯಾನಂದ ಅವರೊಂದಿಗೆ ಮಾಹಿತಿ ಪಡೆದುಕೊಂಡರು. ಅದೇರೀತಿ, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲೂ ಪರಿಶೀಲಿಸಿ ಸಿಬ್ಬಂದಿ ಜೊತೆ ಮಾತನಾಡಿದರು.

ಡಿ.ಸಿ.ಎಂ ಎದುರೇ ವಾಗ್ವಾದ: ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಎದುರೇ ಉಪನ್ಯಾಸಕರು ಮತ್ತು ವಿದ್ಯಾರ್ಥಿ ಮುಖಂಡ ಸಿದ್ದಾರ್ಥ ನಾಯಕ ನಡುವೆ ವಾಗ್ವಾದ ನಡೆಯಿತು.

ಕಾಲೇಜಿನಲ್ಲಿ ಹಲವು ಸಮಸ್ಯೆಗಳಿವೆ ಎಂದು ಅಶ್ವತ್ಥ ನಾರಾಯಣ ಅವರಿಗೆ ಸಿದ್ಧಾರ್ಥ ದೂರಿದರು. ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಅದಲು ಬದಲು ಮಾಡಿ ಬೋಧಿಸಲಾಗಿದೆ, ಹಲವು ಅವ್ಯವಹಾರಗಳಾಗಿವೆ ಎಂದು ಆರೋಪಿಸಿದರು. 

ಆಗ ಮಧ್ಯಪ್ರವೇಶಿಸಿದ ಉಪನ್ಯಾಸಕರಲ್ಲಿ ಕೆಲವರು, ತಮ್ಮ ಸಮರ್ಥನೆ ನೀಡಲು ಮುಂದಾದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಶಾಸಕಿ ರೂಪಾಲಿ ನಾಯ್ಕ ಕೂಡ ಕಾಲೇಜಿನ ಸಮಸ್ಯೆಗಳ ಬಗ್ಗೆ ಉಪ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ಬಳಿಕ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಶ್ವತ್ಥ ನಾರಾಯಣ, ‘ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಬೇಕಿದೆ. ಅವು ಎಲ್ಲಿಂದ ಆರಂಭವಾದರೆ ಇನ್ನೆಲ್ಲಿಗೋ ಹೋಗುತ್ತದೆ. ಕಾಲೇಜಿಗೆ ಕಾಯಂ ಪ್ರಾಂಶುಪಾಲರಿಲ್ಲ. ಯಜಮಾನರು ಸರಿಯಿದ್ದರೆ ಎಲ್ಲವೂ ಸರಿಯಿರುತ್ತದೆ’ ಎಂದರು.

‘ಕಾಲೇಜಿಗೆ ಕಾಂಪೌಂಡ್, ಕುಡಿಯುವ ನೀರಿನ ಸೌಲಭ್ಯ ಬೇಕಿದೆ. ಈಗ ಗ್ರಾಮೀಣ ವಿದ್ಯುತ್ ಸಂಪರ್ಕದಲ್ಲಿದೆ. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು