ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅಂಗನವಾಡಿ ಮಕ್ಕಳಿಗೂ ‘ಇ ಕಲಿಕೆ’

ವಾಟ್ಸ್‌ಆ್ಯಪ್ ಮೂಲಕ ಕಲಿಕಾ ವಿಷಯಗಳ ರವಾನೆ: ಜಿಲ್ಲೆಯಲ್ಲೂ ಜಾರಿ
Last Updated 18 ಆಗಸ್ಟ್ 2020, 8:16 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ಕಾರಣದಿಂದ ಅಂಗನವಾಡಿಗಳು ಪುನರಾರಂಭ ಆಗದಿದ್ದರೂ ಮಕ್ಕಳ ಕಲಿಕೆ ನಿಲ್ಲದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‘ಇ ಕಲಿಕೆ‌’ ಯೋಜನೆ ರೂಪಿಸಿದೆ. ಜಿಲ್ಲೆಯಲ್ಲೂ ಇದರ ಜಾರಿಗೆ ಸಿದ್ಧತೆ ನಡೆದಿದೆ.

ಅಂಗನವಾಡಿಗಳಲ್ಲಿ ಪ್ರತಿ ತಿಂಗಳು ಬೋಧಿಸುವ ನಾಲ್ಕು ವಿಷಯಗಳನ್ನು ವಿಂಗಡಿಸಿ, ಪಾಲಕರ ಆಂಡ್ರ್ಯಾಯ್ಡ್ ಮೊಬೈಲ್ ಫೋನ್‌ಗಳಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುತ್ತದೆ. ಅವುಗಳನ್ನು ಮಕ್ಕಳಿಗೆ ತೋರಿಸಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸುವುದು ಇದರ ಉದ್ದೇಶವಾಗಿದೆ.

ಬೆಂಗಳೂರಿನ ‘ಮಕ್ಕಳ ಜಾಗೃತಿ’ ಎಂಬ ಸಂಸ್ಥೆಯೊಂದರ ಸಹಯೋಗದಲ್ಲಿ ಈ ಯೋಜನೆಯಲ್ಲಿ ಜಾರಿ ಮಾಡಲಾಗಿದೆ. ಅಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಹಮ್ಮಿಕೊಂಡ ‘ಇ ತರಗತಿ’ಗಳು ಯಶಸ್ವಿಯಾಗಿವೆ. ಅದರ ಆಧಾರದಲ್ಲಿ ಜಿಲ್ಲೆಯಲ್ಲೂ ಜಾರಿ ಮಾಡಲು ಇಲಾಖೆ ಉದ್ದೇಶಿಸಿದೆ.

ವಾಟ್ಸ್‌ಆ್ಯಪ್ ಬಳಕೆ:

ಅಂಗನವಾಡಿ ಶಿಕ್ಷಕರಿಗೆ ಹಾಗೂ ಸೂಪರ್‌ವೈಸರ್‌ಗಳಿಗೆ ಕೇಂದ್ರ ಸರ್ಕಾರದ ‘ಪೋಷಣ್ ಅಭಿಯಾನ’ದ ಅಡಿ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ನೀಡಲಾಗಿದೆ. ಅವುಗಳನ್ನೇ ಈ ಯೋಜನೆಗೂ ಬಳಸಲಾಗುತ್ತದೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಿಂದ ರಾಜ್ಯದ ಎಲ್ಲ ಉಪ ನಿರ್ದೇಶಕರ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಉಪ ನಿರ್ದೇಶಕರು, ಸಮಗ್ರ ಶಿಶು ಅಭಿವೃದ್ಧಿ ಅಧಿಕಾರಿಗಳು (ಸಿ.ಡಿ.ಪಿ.ಒ), ಸೂಪರ್‌ವೈಸರ್‌ಗಳ ಮೊಬೈಲ್ ಸಂಖ್ಯೆಗಳನ್ನು ಸೇರಿಸಿ ಗ್ರೂಪ್ ಸಿದ್ಧಪಡಿಸಬೇಕು. ಅವರು ತಮ್ಮ ಅಂಗನವಾಡಿಗಳ ವ್ಯಾಪ್ತಿಯಲ್ಲಿರುವ ಮಕ್ಕಳ ಪಾಲಕರ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡ ಗ್ರೂಪ್ ರಚಿಸಬೇಕು’ ಎಂದು ಇಲಾಖೆಯ ಉಪ ನಿರ್ದೇಶಕಿ ಪದ್ಮಾವತಿ ಮಾಹಿತಿ ನೀಡಿದರು.

‘ಈ ಗುಂಪುಗಳಿಗೆ ಕೇಂದ್ರ ಕಚೇರಿಯ ಅಧಿಕಾರಿಗಳು ಮಕ್ಕಳು ಕೇಳುವ, ನೋಡುವ ಕಲಿಕಾ ವಿಷಯಗಳನ್ನು ಕಳುಹಿಸುತ್ತಾರೆ. ಅವುಗಳನ್ನು ಕೆಳಹಂತದ ಅಧಿಕಾರಿಗಳು ಒಂದೊಂದೇ ಗುಂಪುಗಳ ಜೊತೆ ಹಂಚಿಕೊಂಡು ಕೊನೆಗೆ ಪಾಲಕರ ಮೊಬೈಲ್‌ ಫೋನ್‌ಗೆ ತಲುಪಿಸುತ್ತಾರೆ. ಪಾಲಕರು ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಮಕ್ಕಳಿಗೆ ತೋರಿಸಬೇಕು. ಅವರು ಕಲಿಕೆಯಲ್ಲಿ ತೊಡಗಿರುವುದನ್ನು ಫೋಟೊ ತೆಗೆದು ಹಿರಿಯ ಅಧಿಕಾರಿಗಳಿಗೆ ಕಳುಹಿಸುವುದು ಈ ಯೋಜನೆಯಲ್ಲಿ ಸೇರಿದೆ’ ಎಂದು ಹೇಳಿದರು.

ಒಂದಷ್ಟು ಸವಾಲುಗಳು:

ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಸಾವಿರಾರು ‍ಪಾಲಕರ ದೂರವಾಣಿ ಸಂಖ್ಯೆಗಳನ್ನು ಸೇರಿಸಿದಾಗ ಮೊಬೈಲ್ ಫೋನ್ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಬಲ್ಲುದೇ ಎಂಬುದು ಒಂದು ಸವಾಲು. ಅದೇ ರೀತಿ, ಉತ್ತರ ಕನ್ನಡದಂಥ ಜಿಲ್ಲೆಗಳಲ್ಲಿ ಮೊಬೈಲ್ ದೂರವಾಣಿಯ ಸಿಗ್ನಲ್ ಹಾಗೂ ಇಂಟರ್‌ನೆಟ್ ಲಭಿಸುವುದು ಮತ್ತೊಂದು ಸವಾಲಾಗಿದೆ. ಆದರೂ ಎಷ್ಟು ಪಾಲಕರು ಸಾಧ್ಯವೋ ಅಷ್ಟು ಮಂದಿಯನ್ನು ಸಂಪರ್ಕಿಸಿ ಯೋಜನೆ ಜಾರಿಗೆ ತರಲು ಇಲಾಖೆ ಮುಂದಡಿಯಿಟ್ಟಿದೆ.

ಜಿಲ್ಲೆಯಲ್ಲಿ ಅಂಗನವಾಡಿ: ಅಂಕಿ ಅಂಶ

51,756 - ಜಿಲ್ಲೆಯಲ್ಲಿರುವ 3ರಿಂದ 6 ವರ್ಷದ ಮಕ್ಕಳು

2,687 - ಅಂಗನವಾಡಿ ಶಿಕ್ಷಕಿಯರು

101 -ಒಟ್ಟು ಸೂಪರ್‌ವೈಸರ್‌ಗಳು

96 - ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT