ಬುಧವಾರ, ಡಿಸೆಂಬರ್ 8, 2021
18 °C
ನಿರಂತರ ಮಳೆಯಿಂದ ಆರದ ತೇವಾಂಶ: ವಿವಿಧೆಡೆ ಅಡಿಕೆಗೆ ತಿಗಣೆ ಕಾಟ

ವಾಡಿಕೆಗೂ ಮೊದಲೇ ಕಾಣಿಸಿದ ಕೊಳೆ ರೋಗ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಈ ವರ್ಷ ಅವಧಿಗೂ ಮುಂಚೆಯೇ ಸಾಕಷ್ಟು ಮಳೆಯಾದ ಪರಿಣಾಮ ಅಡಿಕೆ ಬೆಳೆಗೆ ಬೇರೆ ಬೇರೆ ಹಾನಿಗಳು ಕಾಣಿಸುತ್ತಿವೆ. ಕರಾವಳಿ ತಾಲ್ಲೂಕುಗಳ ಕೆಲವೆಡೆ ಈಗಾಗಲೇ ಕೊಳೆ ರೋಗ ಕಾಣಿಸಿಕೊಂಡಿದ್ದರೆ, ಮಲೆನಾಡಿನ ವಿವಿಧೆಡೆ ತಿಗಣೆ ಕಾಟ ಹೆಚ್ಚಿದೆ.

ಹೊನ್ನಾವರ ತಾಲ್ಲೂಕಿನ ಕವಲಕ್ಕಿ ಸುತ್ತಮುತ್ತ ಅಡಿಕೆ ತೋಟಗಳ ಹಲವು ಮರಗಳಲ್ಲಿ ಕೊಳೆ ರೋಗ ಹರಡಿದೆ. ಮೂರು ನಾಲ್ಕು ದಿನಗಳಿಂದ ದೊಡ್ಡ ಅಡಿಕೆಗಳು ಗೊನೆಯಿಂದ ಉದುರಿ ಬೀಳುತ್ತಿವೆ. ಮರಗಳ ಬುಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ಅಡಿಕೆಗಳು ಕಂಡುಬರುತ್ತಿವೆ. ಮಿಳ್ಳೆಗಳು ರಸ ತುಂಬಿ ಗಟ್ಟಿಯಾಗುವ ಹಂತದಲ್ಲಿ ಹಾನಿಯಾಗುತ್ತಿರುವುದು ಬೆಳೆಗಾರರ ಚಿಂತೆ ಹೆಚ್ಚಿಸಿದೆ.

‘ನಮ್ಮ ತೋಟದಲ್ಲಿ ಕೆಲವು ದಿನಗಳಿಂದ ಹತ್ತಾರು ಮರಗಳಿಂದ ಅಡಿಕೆ ಮಿಳ್ಳೆಗಳು ಬೀಳುತ್ತಿವೆ. ಈ ಬಾರಿ ವರ್ಷಪೂರ್ತಿ ಮಳೆಯಿದ್ದ ಕಾರಣ ತೋಟದಲ್ಲಿ ತೇವಾಂಶ ಕಡಿಮೆಯಾಗಲೇ ಇಲ್ಲ. ಜೊತೆಗೇ ಈಚೆಗೆ ಬೀಸಿದ್ದ ತೌತೆ ಚಂಡಮಾರುತದಿಂದಾಗಿ ಮತ್ತಷ್ಟು ಮಳೆಯಾಯಿತು. ಇದರಿಂದ ಅಡಿಕೆ ಮರಗಳಲ್ಲಿ ಗೊನೆ ಬಿಡುವ ಜಾಗ ಒಣಗಲೇ ಇಲ್ಲ. ಚಂಡಮಾರುತದ ಪ್ರಭಾವ ಕಡಿಮೆಯಾಗುವಷ್ಟರಲ್ಲಿ ಮುಂಗಾರು ಪ್ರವೇಶವಾಯಿತು. ಹೀಗಾಗಿ ಕೊಳೆರೋಗಕ್ಕೆ ಪೂರಕವಾದ ವಾತಾವರಣವೇ ಸೃಷ್ಟಿಯಾಯಿತು’ ಎನ್ನುತ್ತಾರೆ ಕವಲಕ್ಕಿಯ ಯುವ ಕೃಷಿಕ ವಿನಯ್ ಶೆಟ್ಟಿ.

‘ಮಳೆಗಾಲದ ಆರಂಭದಲ್ಲೇ ಬೋರ್ಡೊ ಮಿಶ್ರಣ ಸಿಂಪಡಿಸಿದ್ದೇವೆ. ಹಾಗಾಗಿ ಈಗ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಈಗ ಅಡಿಕೆಗೆ ದರವೂ ಉತ್ತಮವಾಗಿದ್ದು, ಬೆಳೆ ಹಾನಿಯನ್ನು ತಡೆಯಲು ಅಗತ್ಯ ಕ್ರಮ ಬೇಕಾಗಿದೆ. ಅಲ್ಲದೇ ಔಷಧಿ ಸಿಂಪಡಿಸಲು ನುರಿತ ಕೆಲಸಗಾರರ ಕೊರತೆಯೂ ಇದೆ. ಪ್ರತಿ ಕೆ.ಜಿ ಔಷಧ ಸಿಂಪಡಣೆಗೆ ₹ 600ರಷ್ಟು ದುಬಾರಿ ಕೂಲಿ ಕೇಳುತ್ತಾರೆ. ಈಗ ಬೆಳೆ ನಷ್ಟವಾದರೆ ಭಾರಿ ನಷ್ಟವಾಗುವ ಆತಂಕವಿದೆ’ ಎಂದು ಹೇಳುತ್ತಾರೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳ ವಿವಿಧೆಡೆ ಅಡಿಕೆಗೆ ತಿಗಣೆಗಳು ಹಾವಳಿ ಹೆಚ್ಚುತ್ತಿದೆ. ಅಡಿಕೆ ಮಿಳ್ಳೆಗಳಿಗೆ ರಂಧ್ರ ಕೊರೆದು ಒಳ ಸೇರುವ ಅವು, ರಸ ಹೀರುತ್ತವೆ. ಬಳಿಕ ಅಡಿಕೆಯು ತೊಟ್ಟಿನಿಂದ ಕಳಚಿ ಬೀಳುತ್ತದೆ. ಇದರಿಂದಲೂ ಹಲವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

‘ಇಲಾಖೆ ಸಂಪರ್ಕಿಸಿ’:

‘ಕರಾವಳಿ ಭಾಗದಲ್ಲಿ ಈ ವರ್ಷಪೂರ್ತಿ ಮಳೆ ಮತ್ತು ಚಂಡಮಾರುತದ ಕಾರಣ ಶೀತ ವಾತಾವರಣವಿದೆ. ಕಳೆದ ವರ್ಷ ಕೊಳೆರೋಗ ಕಾಣಿಸಿಕೊಂಡ ತೋಟಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರದಿದ್ದರೆ ಈ ವರ್ಷ ಸಮಸ್ಯೆ ಕಾಣಿಸಿಕೊಳ್ಳಬಹುದು. ಉಳಿದಂತೆ, ಈಗ ತಿಗಣೆ ಕಾಟದಿಂದಾಗಿ ಅಡಿಕೆ ಬೀಳುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಅದಕ್ಕೆ ಕೀಟನಾಶಕ ಸಿಂಪಡಿಸಬೇಕು’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ತಿಳಿಸಿದ್ದಾರೆ.

‘ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ತಿಗಣೆ ಕಾಟವಿದ್ದರೆ ಬೋರ್ಡೊ ಸಿಂಪಡಣೆಯಿಂದ ಪ್ರಯೋಜನವಿಲ್ಲ. ಈ ಬಗ್ಗೆ ಗೊಂದಲಗಳಿದ್ದರೆ, ಬೆಳೆಗಾರರು ತೋಟಗಾರಿಕಾ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು