ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಸುಕ್ರಜ್ಜಿ ಮನೆಯಂಗಳದಲ್ಲಿ ಕಲಾ ಗ್ಯಾಲರಿ

‘ಜಾನಪದ ಕೋಗಿಲೆ’ಯ ಬದುಕಿನ ಯಾನ ಪರಿಚಯಿಸುವ ಉದ್ದೇಶ
Last Updated 6 ಜನವರಿ 2022, 19:31 IST
ಅಕ್ಷರ ಗಾತ್ರ

ಅಂಕೋಲಾ: ಔಪಚಾರಿಕ ಅಕ್ಷರ ಜ್ಞಾನವಿಲ್ಲದೆ ಏಳು ದಶಕ ಸಾವಿರಾರು ಜಾನಪದ ಹಾಡುಗಳನ್ನು ನಾಡಿನ ಮೂಲೆ ಮೂಲೆಗೆ ಪಸರಿಸಿದವರು ಸುಕ್ರಿ ಗೌಡ. ‘ಜಾನಪದ ಕೋಗಿಲೆ’ ಎಂದೇ ಪ್ರಸಿದ್ಧರಾಗಿರುವ ಅವರ ಬದುಕಿನ ಯಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ವಿಶಿಷ್ಟ ಆರ್ಟ್ ಗ್ಯಾಲರಿ ನಿರ್ಮಾಣವಾಗಲಿದೆ.

ಅಂಕೋಲಾ ತಾಲ್ಲೂಕಿನ ಬಡಗೇರಿಯ ಸುಕ್ರಜ್ಜಿ ಅವರ ಮನೆಯಂಗಳದಲ್ಲಿ, ಬೆಂಗಳೂರಿನ ಎಚ್.ಎನ್.ರಾಜೇಶ್ ಅವರ ಪರಿಕಲ್ಪನೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಆದಿಚುಂಚನಗಿರಿ ಮಠದ ಸಹಕಾರದೊಂದಿಗೆ ಆಧುನಿಕ ಶೈಲಿಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ.

ಸುಕ್ರಜ್ಜಿಯ ಜಾನಪದ ಹಾಡುಗಳ ಬದುಕು ಮತ್ತು ಅವುಗಳ ಕುರಿತ ಸಾಹಿತ್ಯ, ‘ಪದ್ಮಶ್ರೀ’, ‘ನಾಡೋಜ’, ‘ಜನಪದ ಶ್ರೀ’, ‘ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳ ನೆನಪನ್ನು ಕಟ್ಟಿಕೊಡಲಾಗುತ್ತಿದೆ. ಸಾಂಸ್ಕೃತಿಕ ಲೋಕದ ಕೊಡುಗೆಯೊಂದಿಗೆ ಸಾರಾಯಿ ವಿರೋಧಿ ಹೋರಾಟ, ಅರಣ್ಯ ಹಕ್ಕು ಹೋರಾಟ ಮತ್ತು ಹಾಲಕ್ಕಿ ಸಮುದಾಯದ ಪರಿಶಿಷ್ಟ ಪಂಗಡ ಸೇರ್ಪಡೆಯ ಹೋರಾಟದ ಅಂಶಗಳು ಗ್ಯಾಲರಿಯಲ್ಲಿ ಇರಲಿವೆ.

ಸುಕ್ರಜ್ಜಿಯು ಹಾವೇರಿಯ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯ, ಧಾರವಾಡ, ಮೈಸೂರು, ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಬೋಧಿಸಿದ ಬದುಕಿನ ಪಾಠ, ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸಲ್ಲಿಸಿದ ಸೇವೆಯ ಮಾಹಿತಿಯೂ ಇಲ್ಲಿ ಇರಲಿದೆ.

ಈಗಾಗಲೇ ಸುಕ್ರಜ್ಜಿ ಮನೆಯಂಗಳದಲ್ಲಿ ಆರ್ಟ್ ಗ್ಯಾಲರಿ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಸ್ಥಳೀಯರು ಮತ್ತು ಹಾಲಕ್ಕಿ ಸಮುದಾಯದ ಮುಖಂಡರೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದೆ. ಅಂದಾಜು ₹ 8 ಲಕ್ಷ ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲು ಯೋಜಿಸಿದ್ದು, ಧ್ವನಿವರ್ಧಕ ವ್ಯವಸ್ಥೆ, ಟಿ.ವಿ, ಪ್ರವಾಸಿಗರಿಗೆ ಶೌಚಾಲಯ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.

‘ಕಲಾ ಗ್ಯಾಲರಿಗೆ ನೀಡಿ’:‘ಸುಕ್ರಿ ಬೊಮ್ಮ ಗೌಡ ಅವರ ಕುರಿತು ಅಧ್ಯಯನ ಮಾಡಲು, ಸಂದರ್ಶಿಸಲು, ಹಾಡು ಕೇಳಲು ಹಾಗೂ ಅವರನ್ನು ಗೌರವಿಸಲು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸಾಹಿತಿಗಳು ಅವರ ಮನೆಗೆ ಭೇಟಿ ನೀಡುತ್ತಲೇ ಇರುತ್ತಾರೆ. ಹೀಗಾಗಿ ಸುಕ್ರಜ್ಜಿ ಅವರ ಬದುಕಿನ ಸಂಪೂರ್ಣ ಚಿತ್ರ ಕಟ್ಟಿಕೊಡಲು ಕಲಾ ಗ್ಯಾಲರಿಯನ್ನು ನಿರ್ಮಿಸಲು ಎಚ್.ಎನ್.ರಾಜೇಶ್ ವಿಶೇಷ ಮುತುವರ್ಜಿಯಿಂದ ಕೈಗೊಂಡಿದ್ದಾರೆ. ಸಾರ್ವಜನಿಕರು ಸುಕ್ರಜ್ಜಿಯ ಕುರಿತಾದ ಹಾಡು, ಹೋರಾಟ, ಪ್ರಶಸ್ತಿ ಇತ್ಯಾದಿಗಳ ಚಿತ್ರ ವಿಡಿಯೊ ಮತ್ತು ಆಡಿಯೊಗಳಿದ್ದಲ್ಲಿ ಕಲಾ ಗ್ಯಾಲರಿಗೆ ನೀಡಿ’ ಎಂದು ಹಾಲಕ್ಕಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ.ಶ್ರೀಧರ ಗೌಡ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT