ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಎ.ಎಸ್.ಪಿ ಬದರಿನಾಥ ಮೇಲೆ ಕಾರು ಹರಿಸಲು ಯತ್ನ, ಸಿಸಿಟಿವಿ ದೃಶ್ಯ ವೈರಲ್

ಕೊಲೆ ಯತ್ನ ಪ್ರಕರಣ ದಾಖಲು
Last Updated 31 ಮಾರ್ಚ್ 2021, 15:12 IST
ಅಕ್ಷರ ಗಾತ್ರ

ಅಂಕೋಲಾ: ಪೊಲೀಸ್ ಹಿರಿಯ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ, ಜೆ.ಎಂ.ಎಫ್.ಸಿ ನ್ಯಾಯಾಲಯವು ಆರೋಪಿಗಳಿಗೆ ಏ.9ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಹಟ್ಟಿಕೇರಿಯ ಟೋಲ್ ಪ್ಲಾಜಾ ಬಳಿ ಮಾರ್ಚ್ 29ರಂದು ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಟೋಲ್ ಪ್ಲಾಜಾ ಮೇಲ್ವಿಚಾರಕ ನವೀನ ಗುಪ್ತ, ಐವರ ವಿರುದ್ಧಸೋಮವಾರ ಅಂಕೋಲಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

‘ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಾದ ಉದ್ಯಮಿ ಸುರೇಶ ರಾಮಚಂದ್ರ ನಾಯಕ, ಬೊಮ್ಮಯ್ಯ ಸಣ್ಣಪ್ಪ ನಾಯಕ ಮತ್ತು ಸುರೇಶ ಗಿರಿಯಣ್ಣ ನಾಯಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ, ಬಾಲಕನನ್ನು ಕಾರವಾರದ ಬಾಲನ್ಯಾಯ ಮಂಡಳಿಯಲ್ಲಿ ಇರಿಸಲಾಗಿದೆ. ಮತ್ತೊಬ್ಬ ಆರೋಪಿ ಗೋಪಾಲ ಗಿರಿಯಣ್ಣ ನಾಯಕ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆಸಿದ್ದೇವೆ’ ಎಂದು ಸಿ.ಪಿ.ಐ ಕೃಷ್ಣಾನಂದ ನಾಯಕ ಮಾಹಿತಿ ನೀಡಿದರು.

ಘಟನೆಯ ವಿಡಿಯೊ ವೈರಲ್

ಹೋಳಿ ಹಬ್ಬದ ದಿನ ಹಟ್ಟಿಕೇರಿಯ ಟೋಲ್ ಪ್ಲಾಜಾ ಬಳಿ ನಡೆದ ಘಟನೆಯ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿಗಳು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವಾಗ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಹೆಚ್ಚು ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ್ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದರು.

ಸಮಾಧಾನಗೊಳ್ಳದ ಆರೋಪಿಗಳು, ಎ.ಎಸ್.ಪಿ ಅವರ ಮೇಲೆಯೇ ಸ್ಕಾರ್ಪಿಯೋ ವಾಹನವನ್ನು ಹರಿಸಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿದೆ. ಘಟನೆಯಲ್ಲಿ ಬದರಿನಾಥ್ ಅವರ ಕಾಲಿಗೆ ಪೆಟ್ಟಾಗಿದೆ. ಮುಂದುವರಿದ ಆರೋಪಿಗಳು ಬದರಿನಾಥ ಹಾಗೂ ಸಿಬ್ಬಂದಿಯನ್ನು ಸುಮಾರು 25 ಮೀಟರ್‌ವರೆಗೆ ಸ್ಕಾರ್ಪಿಯೋದಿಂದ ತಳ್ಳಿಕೊಂಡು ಹೋಗಿದ್ದಾರೆ.

ಇಷ್ಟೆಲ್ಲ ಆದರೂ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗದೇ ಕೇವಲ ಟೋಲ್ ಪ್ಲಾಜಾ ಮೇಲ್ವಿಚಾರಕರ ಹೆಸರಿನಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿಸಿದೆ. ಇದರಿಂದ ಎಚ್ಚೆತ್ತ ಪೊಲೀಸರು, ಆರೋಪಿಗಳ ವಿರುದ್ಧಮಂಗಳವಾರ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT